ಸಾರಾಂಶ
ಕೊಡಗಿನಲ್ಲಿ ಇತ್ತೀಚೆಗೆ ಪತ್ತೆಯಾದ ತೆಲಂಗಾಣ ಮೂಲದ ರಮೇಶ್ ಎಂಬಾತನ ಶವದ ಹಿಂದೆ, ಪತ್ನಿಯ 8 ಕೋಟಿ ಆಸ್ತಿ ಲಪಟಾಯಿಸುವ ಸಂಚು ಅಡಗಿತ್ತು. ಹೀಗೆ ಹಣಕ್ಕಾಗಿ ಪತಿ ರಮೇಶ್‌ನನ್ನು ಹತ್ಯೆಗೈದ ಪತ್ನಿ 800 ಕಿ.ಮೀ ದೂರದ ಕೊಡಗಿಗೆ ಬಂದು ಶವ ಎಸೆದು ಹೋಗಿದ್ದಳು.
ಹೈದರಾಬಾದ್: ಕೊಡಗಿನಲ್ಲಿ ಇತ್ತೀಚೆಗೆ ಪತ್ತೆಯಾದ ತೆಲಂಗಾಣ ಮೂಲದ ರಮೇಶ್ ಎಂಬಾತನ ಶವದ ಹಿಂದೆ, ಪತ್ನಿಯ 8 ಕೋಟಿ ಆಸ್ತಿ ಲಪಟಾಯಿಸುವ ಸಂಚು ಅಡಗಿತ್ತು. ಹೀಗೆ ಹಣಕ್ಕಾಗಿ ಪತಿ ರಮೇಶ್‌ನನ್ನು ಹತ್ಯೆಗೈದ ಪತ್ನಿ ನಿಹಾರಿಕ ಬಳಿಕ ಕಾರಿನಲ್ಲಿ ಶವ ಇಟ್ಟುಕೊಂಡು ತೆಲಂಗಾಣದಿಂದ 800 ಕಿ.ಮೀ ದೂರದ ಕೊಡಗಿಗೆ ಬಂದು ಶವ ಎಸೆದು ಹೋಗಿದ್ದಳು. 8 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಪತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಿಹಾರಿಕಾ ಈ ಕೃತ್ಯ ಎಸಗಿದ್ದಳು ಎಂಬ ಆಘಾತಕಾರಿ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಮೃತ ರಮೇಶ್ ಪತ್ನಿ ನಿಹಾರಿಕಾ, ಆಕೆಯ ಪ್ರಿಯತಮ ನಿಖಿಲ್ ಹಾಗೂ ಇನ್ನೋರ್ವ ಆರೋಪಿ ಅಂಕುರ್‌ನನ್ನು ಬಂಧಿಸಲಾಗಿದೆ.
ಆರೋಪಿಗಳ ಪತ್ತೆ ಹೇಗೆ?:
ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಶವವೊಂದು ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕೆಂಪು ಬಣ್ಣದ ಕಾರೊಂದು ಪತ್ತೆಯಾಗಿದೆ. ಆ ಕಾರು ರಮೇಶ್ ಹೆಸರನ್ನು ನೋಂದಣಿಯಾಗಿತ್ತು. ಅವರ ಪತ್ನಿ ನಿಹಾರಿಕಾ ತಮ್ಮ ಪತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದು ತಿಳಿಯುತ್ತಿದ್ದಂತೆ ತೆಲಂಗಾಣ ಪೊಲೀಸರನ್ನು ಸಂಪರ್ಕಿಸಲಾಯಿತು.
ಈ ವೇಳೆ ಕೊಲೆಯಲ್ಲಿ ನಿಹಾರಿಕಾ ಪಾತ್ರ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆ ವೇಳೆ ಆಕೆ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಂತೆಯೇ ಕೃತ್ಯದಲ್ಲಿ ಭಾಗಿಯಾದ ಇತರರ ಹೆಸರನ್ನೂ ಬಾಯ್ಬಿಟ್ಟಿದ್ದಾಳೆ.
ಯಾರು ಈ ನಿಹಾರಿಕಾ?:
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಈಕೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದು, ಮಗುವಾದ ನಂತರ ವಿಚ್ಛೇದನ ಪಡೆದಿದ್ದಳು. ಹರ್ಯಾಣದಲ್ಲಿ ಹಣಕಾಸು ವಂಚನೆ ಆರೋಪದಲ್ಲಿ ಜೈಲು ಸೇರಿದ್ದ ಈಕೆಗೆ ಅಂಕುರ್‌ನ ಪರಿಚಯವಾಗಿತ್ತು.
ಅಲ್ಲಿಂದ ಬಿಡುಗಡೆಯಾದ ಬಳಿಕ ರಮೇಶ್ ಜೊತೆ 2ನೇ ಮದುವೆಯಾದ ನಿಹಾರಿಕಾ, ನಿಖಿಲ್ ಎಂಬುವವನ ಜತೆಗೂ ಸಂಬಂಧವಿರಿಸಿಕೊಂಡಿದ್ದಳು.