ತೆಲುಗು ಮಾಧ್ಯಮ ದಿಗ್ಗಜ ರಾಮೋಜಿ ರಾವ್‌ ಇನ್ನಿಲ್ಲ

| Published : Jun 09 2024, 01:30 AM IST / Updated: Jun 09 2024, 04:28 AM IST

ತೆಲುಗು ಮಾಧ್ಯಮ ದಿಗ್ಗಜ ರಾಮೋಜಿ ರಾವ್‌ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರಾಮೋಜಿ ರಾವ್‌ ನಿಧನರಾಗಿದ್ದು, ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಇಂದು ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ. ಈನಾಡು ಸಮೂಹ ಸಂಸ್ಥೆಯ ಸ್ಥಾಪಕನ ನಿಧನಕ್ಕೆ ಮೋದಿ ಸೇರಿ ಗಣ್ಯರ ಶೋಕ ವ್ಯಕ್ತವಾಗಿದೆ.

ಹೈದರಾಬಾದ್‌: ಈನಾಡು ಹಾಗೂ ಈಟೀವಿ ಸಂಸ್ಥೆಗಳ ಮೂಲಕ ತೆಲುಗು ಮಾಧ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಾಮೋಜಿ ಫಿಲ್ಮ್‌ ಸಿಟಿಯ ನಿರ್ಮಾತೃ ರಾಮೋಜಿ ರಾವ್‌ (88) ಶನಿವಾರ ಮುಂಜಾನೆ ನಿಧನರಾದರು. ಇದರೊಂದಿಗೆ ತೆಲುಗು ಮಾಧ್ಯಮದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.

ರಾಮೋಜಿ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.5ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಶನಿವಾರ ಮುಂಜಾನೆ 4:50ಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಿಸಿದೆ. ಹಾಗಾಗಿ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್‌ ಸಿಟಿಯಲ್ಲಿರುವ ಅವರ ಮನೆಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗಿದೆ. ಅಲ್ಲಿ ಅವರನ್ನು ಕೊನೆಯ ಬಾರಿಗೆ ಕಾಣಲು ಜನಸಾಗರವೇ ಹರಿದು ಬಂದಿದ್ದು, ಆಸ್ಕರ್‌ ಪ್ರಶಸ್ತಿ ವಿಜೇತ ಕೀರವಾಣಿಯೂ ಸೇರಿದಂತೆ ಹಲವು ಗಣ್ಯರು ಬಂದು ನಮನ ಸಲ್ಲಿಸಿದ್ದಾರೆ.

ಪತ್ನಿ ಮತ್ತು ಪುತ್ರರನ್ನು ಅಗಲಿರುವ ರಾಮೋಜಿ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ 9ರಿಂದ 11ರೊಳಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನೆರವೇರಲಿದೆ. ರಾಮೋಜಿ ನಿಧನಕ್ಕೆ ಗಣ್ಯರ ಸಂತಾಪತೆಲುಗು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಖ್ಯಾತಿ ಗಳಿಸಿದ್ದ ರಾಮೋಜಿ ರಾವ್‌ ನಿಧನಕ್ಕೆ ಶೋಕಸಾಗರವೇ ಹರಿದುಬಂದಿದೆ,ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ರಾಮೋಜಿ ರಾವ್‌ ಮಾಧ್ಯಮ ಮತ್ತು ಚಿತ್ರರಂಗದಲ್ಲಿ ಹೊಸ ಅನ್ವೇಷಣೆಗಳನ್ನು ಮಾಡಿ ಹೊಸ ಆಯಾಮಕ್ಕೆ ಕೊಂಡೊಯ್ದು ಅಳಿಸಲಾಗದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ಅವರು ರಾಮೋಜಿಯವರು ಯಾರಿಗೂ ತಲೆಬಾಗದೆ ನೇರವಾಗಿ ಸ್ವರ್ಗಸ್ಥರಾಗಿದ್ದಾರೆ ಎಂದು ಶೋಕಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.