ಕೇರಳ ದೇಗುಲಗಳಲ್ಲಿ ಪುರುಷರು ಅಂಗಿ ತೆಗೆಯುವ ಪದ್ಧತಿ ರದ್ದು? ದೇವಸ್ವಂ ಮಂಡಳಿ ಚಿಂತನೆ

| Published : Jan 02 2025, 01:47 AM IST / Updated: Jan 02 2025, 04:19 AM IST

ಸಾರಾಂಶ

ಕೇರಳದಲ್ಲಿ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವುದನ್ನು ಕಡ್ಡಾಯಗೊಳಿಸುವ ಪದ್ಧತಿಯನ್ನು ರದ್ದುಗೊಳಿಸಲು ಕೇರಳ ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೇರಳ ಸರ್ಕಾರದ ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ತಿರುವನಂತಪುರ: ಕೇರಳದಲ್ಲಿ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವುದನ್ನು ಕಡ್ಡಾಯಗೊಳಿಸುವ ಪದ್ಧತಿಯನ್ನು ರದ್ದುಗೊಳಿಸಲು ಕೇರಳ ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೇರಳ ಸರ್ಕಾರದ ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಮಂಗಳವಾರ ಶಿವಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಠದ ಮುಖ್ಯಸ್ಥ ಸಚ್ಚಿದಾನಂದ ಸ್ವಾಮಿ, ‘ಪುರುಷರು ಜನಿವಾರ ಧರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಇದು ಸಾಮಾಜಿಕ ಪಿಡುಗು. ಇನ್ನಾದರೂ ಈ ಪದ್ಧತಿ ಕೊನೆಗೊಳಿಸಬೇಕಿದೆ’ ಎಂದು ಆಗ್ರಹಿಸಿದ್ದರು. ಜತೆಗೆ, ಶ್ರೀ ನಾರಾಯಣ ಗುರುಗಳಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಇದನ್ನು ನಿಷೇಧಿಸಲಾಗುವುದು ಎಂದೂ ಹೇಳಿದ್ದರು. ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶ್ರೀಗಳ ಹೇಳಿಕೆ ಬೆಂಬಲಿಸಿದ್ದರು.

ಅದರ ಬೆನ್ನಲ್ಲೇ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್‌, ‘ಇಂದು ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ನನ್ನನ್ನು ಭೇಟಿಯಾಗಿ ಮೇಲಂಗಿ ತೆಗೆಯುವ ಪದ್ಧತಿ ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಬಗ್ಗೆ ತಿಳಿಸಿದರು. ನನಗೂ ಇದು ಉತ್ತಮ ಸಲಹೆಯಂತೆ ಕಂಡಿತು’ ಎಂದರು. ಆದರೆ ರಾಜ್ಯದಲ್ಲಿರುವ 5 ದೇವಸ್ವಂ ಮಂಡಳಿಗಳಾದ ಗುರುವಾಯೂರು, ತಿರುವಾಂಕೂರು, ಮಲಬಾರ್‌, ಕೊಚ್ಚಿನ್‌ ಮತ್ತು ಕೂಡಲಮಾಣಿಕ್ಯಂ ಪೈಕಿ ಯಾವ ಮಂಡಳಿಯವರು ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ವಿಜಯನ್‌ ಸ್ಪಷ್ಟಪಡಿಸಿಲ್ಲ.

ಈ ನಡುವೆ ದೇಗುಲ ಪ್ರವೇಶದ ವೇಳೆ ಮೇಲಂಗಿ ತೆಗೆವ ಕುರಿತು ಚರ್ಚೆಗೆ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ಇದನ್ನು ಚರ್ಚಿಸುವುದು ಮಂಡಳಿಗಳ ಕೆಲಸ, ಸರ್ಕಾರದ್ದಲ್ಲ’ ಎಂದು ವಿಜಯನ್‌ ತಿರುಗೇಟು ನೀಡಿದರು.