ದೇಗುಲದಲ್ಲಿ ಮೇಲಂಗಿ ತೆಗೆವ ಪದ್ಧತಿ : ಕೇರಳ ಸಿಎಂ ಹೇಳಿಕೆಗೆ ಸಚಿವ ಗಣೇಶ್‌ ಕುಮಾರ್‌ ಕಿಡಿ

| Published : Jan 05 2025, 01:31 AM IST / Updated: Jan 05 2025, 06:11 AM IST

ಸಾರಾಂಶ

ಪುರುಷರ ದೇಗುಲದ ಪ್ರವೇಶದ ವೇಳೆ ಮೇಲುಂಗಿ ತೆಗೆಯುವ ಸಂಪ್ರದಾಯ ಕೈಬಿಡುವ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆಗೆ, ಇದೀಗ ಸ್ವತಃ ಅವರ ಸಂಪುಟದಿಂದಲೇ ವಿರೋಧ ವ್ಯಕ್ತವಾಗಿದೆ.

ತಿರುವನಂತಪುರಂ: ಪುರುಷರ ದೇಗುಲದ ಪ್ರವೇಶದ ವೇಳೆ ಮೇಲುಂಗಿ ತೆಗೆಯುವ ಸಂಪ್ರದಾಯ ಕೈಬಿಡುವ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆಗೆ, ಇದೀಗ ಸ್ವತಃ ಅವರ ಸಂಪುಟದಿಂದಲೇ ವಿರೋಧ ವ್ಯಕ್ತವಾಗಿದೆ. ದೇಗುಲದ ಆಚರಣೆ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶ ಸರಿಯಲ್ಲ. ದೇಗುಲಗಳ ಆಚರಣೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ತಂತ್ರಿಗಳೇ ಬಿಡಿ ಎಂದು ಸಾರಿಗೆ ಸಚಿವ ಗಣೇಶ್‌ ಕುಮಾರ್‌ ಹೇಳಿದ್ದಾರೆ.

ಇದರೊಂದಿಗೆ ಸೂಕ್ಷ್ಮ ವಿಷಯದಲ್ಲಿ ಸರ್ಕಾರದೊಳಗೇ ಭಿನ್ನಾಭಿಪ್ರಾಯ ಇರುವುದು ಬೆಳಕಿಗೆ ಬಂದಿದೆ.ಒಂದು ವೇಳೆ ಪುರುಷರು ಮೇಲಂಗಿ ತೆಗೆದು ದೇಗುಲ ಪ್ರವೇಶಿಸುವುದು ಸೇರಿ ಯಾವುದಾದರೂ ನಿಯಮದಲ್ಲಿ ಬದಲಾವಣೆ ಮಾಡಬೇಕೆಂದು ಸರ್ಕಾರ ಬಯಸಿದರೆ ತಂತ್ರಿಗಳ ಜತೆಗೆ ಸಮಾಲೋಚನೆ ನಡೆಸಲಿ ಅಥವಾ ದೇವಪ್ರಶ್ನೆ ಇಡಲಿ ಎಂದು ನಾಯರ್‌ ಸರ್ವೀಸ್‌ ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಕೆ.ಬಿ.ಗಣೇಶ್‌ ಕುಮಾರ್ ಸಲಹೆ ಸಲಹೆ ನೀಡಿದ್ದಾರೆ.

ವಿವಿಧ ದೇಗುಲಗಳು ತಮ್ಮದೇ ಆದ ಸಂಪ್ರದಾಯ ಮತ್ತು ಪದ್ಧತಿಗಳನ್ನು ಹೊಂದಿವೆ. ಭಕ್ತರು ಅದನ್ನು ಪಾಲಿಸಬೇಕಿದೆ, ಯಾರಿಗೆ ಇವೆಲ್ಲ ಇಷ್ಟವಿಲ್ಲವೋ ಅವರು ದೇಗುಲಕ್ಕೆ ಹೋಗಬೇಕಾಗಿಲ್ಲ ಎಂದು ತಿಳಿಸಿದರು.

ಶಿವಗಿರಿ ಮಠದ ಸಚ್ಚಿದಾನಂದ ಸ್ವಾಮೀಜಿ ಅ‍ವರು ಪುರುಷರು ಮೇಲಂಗಿ ತೆಗೆದರಷ್ಟೇ ದೇಗುಲಕ್ಕೆ ಪ್ರವೇಶ ನೀಡುವ ಪದ್ಧತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ನಿಯಮ ರದ್ದು ಮಾಡುವಂತೆ ಆಗ್ರಹಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರೂ ಬೆಂಬಲ ವ್ಯಕ್ತಪಡಿಸಿದ್ದರು. ಪಿಣರಾಯ್‌ ಅವರ ಈ ನಿಲುವಿಗೆ ಎನ್‌ಎಸ್‌ಎಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.