ಸಾರಾಂಶ
ನವದೆಹಲಿ: ವಿಶ್ವದ ಮುಂಚೂಣಿ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ, ಭಾರತದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು ಭಾರತದಲ್ಲಿ ಅದು ಶೀಘ್ರವೇ ತನ್ನ ಘಟಕ ಆರಂಭಿಸು ಸುಳಿವು ಎಂದು ಹೇಳಲಾಗಿದೆ. ಇತ್ತೀಚಿನ ಅಮೆರಿಕ ಭೇಟಿ ವೇಳೆ ಪ್ರಧಾನಿ ಮೋದಿ, ಮಸ್ಕ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಬಗ್ಗೆ ಟೆಸ್ಲಾ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದ್ದು, ಮುಂಬೈ ಉಪನಗರ ಪ್ರದೇಶಗಳಲ್ಲಿ ನೇಮಕಕ್ಕೆ ಮುಂದಾಗಿದೆ. ಸೇವಾ ಸಲಹೆಗಾರ, ಬಿಡಿಭಾಗಗಳ ಸಲಹೆಗಾರ, ಸರ್ವೀಸ್ ಟೆಕ್ನಿಷಿಯನ್, ಸರ್ವೀಸ್ ಮ್ಯಾನೇಜರ್, ಮಾರಾಟ ಮತ್ತು ಗ್ರಾಹಕ ಬೆಂಬಲ, ಸ್ಟೋರ್ ಮ್ಯಾನೇಜರ್, ವ್ಯಾಪಾರ ಕಾರ್ಯಾಚರಣೆಗಳ ವಿಶ್ಲೇಷಕ, ಗ್ರಾಹಕ ಬೆಂಬಲ ತಜ್ಞರು ಆದೇಶ ಕಾರ್ಯಾಚರಣೆಗಳ ತಜ್ಞರು, ಇನ್‌ಸೈಡ್ ಮಾರಾಟ ಸಲಹೆಗಾರರಯ ಮತ್ತು ಗ್ರಾಹಕ ಸೇವಾ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.==
ಅಯೋಧ್ಯೆ ರಾಮಮಂದಿರ ಸ್ಥಳಕ್ಕೆ ಬೈಕಲ್ಲಿ ತೆರಳಲು ಕಿ.ಮೀಗೆ ₹300ಅಯೋಧ್ಯೆ: ಇಲ್ಲಿನ ರಾಮ ಮಂದಿರಕ್ಕೆ ಬರುವ ಭಕ್ತರ ಬಳಿ ಕಿಲೋಮೀಟರ್‌ಗೆ 300 ರು.ನಂತೆ ವಸೂಲಿ ಮಾಡಿ ವಿಐಪಿ ದರ್ಶನವೆಂದು ವಂಚಿಸುತ್ತಿದ್ದ ಬೈಕ್ ಸವಾರ ಜಾಲವೊಂದನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ
ಪ್ರಯಾಗರಾಜ್‌ನಲ್ಲಿ ಕುಂಭಮೇಳ ಆರಂಭಗೊಂಡ ಬಳಿಕ ಪಕ್ಕದ ಅಯೋಧ್ಯೆಯಲ್ಲಿಯೂ ಜನಾಗಮನ ಹೆಚ್ಚಾಗಿದ್ದು, ಹೀಗಾಗಿ ಅಯೋಧ್ಯೆ ಒಳಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಲಾಭ ಪಡೆಯುತ್ತಿದ್ದ ಬೈಕರ್ಸ್‌ಗಳು, ಅಯೋಧ್ಯೆಯ ವಿವಿಧೆಡೆಗಳಿಂದ ರಾಮ ಮಂದಿರ ಮತ್ತು ಇತರೆಡೆಗೆ ಕರೆತರಲು ಕಿ.ಮೀ.ಗೆ 100-300 ರು.ವರೆಗೆ ವಸೂಲಿ ಮಾಡುತ್ತಿದ್ದರು. ಸ್ಥಳೀಯರು ನೀಡಿದ ದೂರಿನ ಮೇರೆಗೆ ಬೈಕರ್ಸ್‌ಗಳ ವಿರುದ್ಧ ಕೇಸ್ ದಾಖಲಿಸಿ 30 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮತ್ತೊಂದೆಡೆ ವಿಐಪಿ ದರ್ಶನದ ಹೆಸರಿನಲ್ಲಿ ಮುಂಬೈ ಯುವತಿಯಿಂದ 1.8 ಲಕ್ಷ ರು. ವಸೂಲಿ ಮಾಡಿದ ಆರೋಪದ ಮೇರೆಗೆ ಸುರೇಶ್ ಆಚಾರ್ಯ ಎಂಬುವರು ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.==
ರಂಜಾನ್ ವೇಳೆ ಮುಸ್ಲಿಂ ನೌಕರರು 1 ಗಂಟೆ ಮೊದಲೇ ಮನೆಗೆ: ಆಕ್ಷೇಪಹೈದರಾಬಾದ್: ರಂಜಾನ್ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಯಿಂದ 1 ಗಂಟೆ ಮುಂಚೆ ತೆರಳಬಹುದು ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 2 ರಿಂದ 31 ರವರೆಗೆ ಈ ನಿಯಮವು ಜಾರಿಯಲ್ಲಿರಲಿದೆ. ಮುಸ್ಲಿಂ ಉದ್ಯೋಗಿಗಳಿಗೆ ಸಂಜೆ 5 ಗಂಟೆಯ ಬದಲು 4 ಗಂಟೆಗೆ ಕೆಲಸದಿಂದ ಬಿಡುವು ಸಿಗಲಿದೆ. ಶಿಕ್ಷಕರು, ಗುತ್ತಿಗೆ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಮುಸ್ಲಿಂ ಉದ್ಯೋಗಿಗಳಿಗೆ ಮತ್ತು ಮಂಡಳಿಗಳು, ನಿಗಮಗಳು ಮತ್ತು ಸಾರ್ವಜನಿಕ ಕೆಲಸದಲ್ಲಿ ಕೆಲಸ ಮಾಡುವ ನೌಕರರಿಗೆ ಅನ್ವಯಿಸುತ್ತದೆ. ರಂಜಾನ್ ಉಪವಾಸದ ತಿಂಗಳಿನಲ್ಲಿ ತಮ್ಮ ಧಾರ್ಮಿಕ ಕರ್ತವ್ಯಗಳು ಮತ್ತು ಪ್ರಾರ್ಥನೆಗಳನ್ನು ಬೆಂಬಲಿಸಲು ಈ ಕ್ರಮ ಎಂದು ಸರ್ಕಾರ ಹೇಳಿದೆ.ಈ ನಡುವೆ ಸರ್ಕಾರದ ಕ್ರಮವನ್ನು ಟೀಕಿಸಿರುವ ಬಿಜೆಪಿ ಶಾಸಕ ಟಿ.ರಾಜಾ, ‘ಕಾಂಗ್ರೆಸ್ ಕೇವಲ ಮುಸ್ಲಿಂ ಮತಗಳನ್ನು ಅವಲಂಬಿಸಿ ಅಧಿಕಾರವನ್ನು ಗಳಿಸಿದೆ. ಇಂಥ ನಿರ್ಧಾರ ತುಷ್ಟೀಕರಣದ ರಾಜಕೀಯ ಉತ್ತುಂಗವನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ. ಇನ್ನು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯ ಪ್ರತಿಕ್ರಿಯಿಸಿ ‘ನವರಾತ್ರಿಯಂತಹ ಹಬ್ಬಗಳಲ್ಲಿ ಹಿಂದೂಗಳು ಉಪವಾಸವನ್ನು ಆಚರಿಸುವಾಗ ಅಂತಹ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ಸಮುದಾಯದವರ ಧಾರ್ಮಿಕ ಆಚರಣೆಗಳನ್ನು ಸರ್ಕಾರ ಮಾಡುತ್ತಿದೆ. ಈ ಕ್ರಮವನ್ನು ವಿರೋಧಿಸಬೇಕು’ ಎಂದಿದ್ದಾರೆ.
==ಅಗತ್ಯವಿದ್ದರೆ ಜೆಲೆನ್ಸ್ಕಿಜೊತೆ ಮಾತುಕತೆಗೆ ಸಿದ್ಧ: ಪುಟಿನ್
ಮಾಸ್ಕೋ: ರಷ್ಯಾ ಮತ್ತು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳು ಮಂಗಳವಾರ ಸೌದಿ ಅರೇಬಿಯಾದಲ್ಲಿ ಭೇಟಿಯಾಗಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಕೊನೆ ಹಾಡಲು ಮಾತುಕತೆ ನಡೆಸಿದ ಬೆನ್ನಲ್ಲೇ ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಗತ್ಯವಿದ್ದರೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿಜೊತೆಗೆ ಮಾತುಕತೆಗೆ ಸಿದ್ಧರಿದ್ದಾರೆ’ ಎಂದು ರಷ್ಯಾ ಹೇಳಿದೆ.ಈ ಬಗ್ಗೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾಹಿತಿ ನೀಡಿದ್ದು, ‘ಅಗತ್ಯವಿದ್ದರೆ ಜೆಲೆನ್ಸ್ಕಿಯೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಪುಟಿನ್ ಸ್ವತಃ ಹೇಳಿದ್ದಾರೆ. ಆದರೆ ಜೆಲೆನ್ಸ್ಕಿಅವರ ವಿಶ್ವಾಸಾರ್ಹತೆ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುವ ಹಿನ್ನೆಲೆಯಲ್ಲಿ ಯಾವ ಕಾನೂನುಗಳ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮೊದಲು ಚರ್ಚೆ ನಡೆಯಬೇಕು’ ಎಂದು ಹೇಳಿದ್ದಾರೆ.ರಷ್ಯಾ ಮತ್ತು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳು ಮಂಗಳವಾರ ಸೌದಿಯಲ್ಲಿ ಭೇಟಿಯಾಗಿ ಅಮೆರಿಕ ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ಯುದ್ಧವನ್ನು ಅಂತ್ಯಗೊಳಿಸಲು ಮಾತುಕತೆ ನಡೆಸಿದ್ದರು. ಆದರೆ ಈ ಸಭೆಯಲ್ಲಿ ಉಕ್ರೇನ್ ಅಧಿಕಾರಿಗಳು ಭಾಗವಹಿಸಿರಲಿಲ್ಲ.
==ವಧುವಿನ ತಂದೆ ಕೊಟ್ಟ ವರದಕ್ಷಿಣೆ ತಿರಸ್ಕರಿಸಿದ ರಾಜಸ್ಥಾನದ ಯುವಕ
ಜೈಸಲ್ಮೇರ್: ಮದುವೆ ಮಂಟಪದಲ್ಲಿ ವಧುವಿನ ತಂದೆ ನೀಡಿದ 5.5 ಲಕ್ಷ ವರದಕ್ಷಿಣೆ ಹಣವನ್ನು ಹಿಂದಿರುಗಿಸುವ ಮೂಲಕ ರಾಜಸ್ಥಾನದ ಜೈಸಲ್ಮೇರ್‌ನ ಪರಮವೀರ ರಾಥೋಡ್ (30) ಎಂಬ ಯುವಕ ಸಮಾಜಕ್ಕೆ ಮೇಲ್ಪಂಕ್ತಿಯಾಗಿದ್ದಾನೆ. ನಾಗರಿಕ ಸೇವಾಕಾಂಕ್ಷಿಯಾಗಿರುವ ರಾಥೋಡ್ ಮತ್ತು ನಿಖಿತಾ ಮದುವೆ ಇತ್ತೀಚೆಗೆ ಆಯೋಜನೆಯಾಗಿತ್ತು. ಮದುವೆ ದಿನ ವಧುವಿನ ತಂದೆ ಸಿಂಗರಿಸಲ್ಪಟ್ಟ ತಟ್ಟೆಯಲ್ಲಿ 5,51,000 ರು. ಹಣವನ್ನು ತಂದು ವರನ ಮುಂದಿಟ್ಟರು. ಅದನ್ನು ಕಂಡು ಬೇಸರಗೊಂಡ ರಾಥೋಡ್ ಹಣ ಹಿಂದಿರುಗಿಸಿದ್ದಾರೆ. ‘ವಿದ್ಯಾವಂತರಾದ ನಮ್ಮಂಥವರೇ ಸಮಾಜದಲ್ಲಿ ಪರಿವರ್ತನೆ ತರದಿದ್ದರೆ ಇನ್ಯಾರು ತರುತ್ತಾರೆ? ನಾವು ಸಮಾಜಕ್ಕೆ ಮಾದರಿಯಾಗಬೇಕು. ಹಾಗಾಗಿ ಸಂಪ್ರದಾಯದಂತೆ ಆ ಸಂದರ್ಭದಲ್ಲಿ ಸ್ವೀಕರಿಸಿದರೂ ಬಳಿಕ ಅವರಿಗೆ ಹಣ ಹಿಂದಿರುಗಿಸಿದ್ದೇನೆ’ ಎಂದಿದ್ದಾರೆ.