ಸಾರಾಂಶ
ಕನ್ನಡಪ್ರಭ ವಾರ್ತೆ ನವದೆಹಲಿ
‘ದಶಕದ ಹಿಂದಿನ ಕಾಂಗ್ರೆಸ್ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಕಳೆದ 10 ವರ್ಷ ನಾವು ಮಾಡಿದ ಅಭಿವೃದ್ಧಿ ನೋಡಿ ನಮಗೆ ಮತ್ತೆ ಜನರು ಮನ್ನಣೆ ನೀಡುವುದು ಖಚಿತ.
ನಮ್ಮ ಮುಂದಿನ 5 ವರ್ಷದ ಆಡಳಿತ ಭಾರತದ 1000 ವರ್ಷದ ಭವಿಷ್ಯದ ದಾರಿದೀಪವಾಗಲಿದೆ. ಹೀಗಾಗಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ನೆತೃತ್ವದ ಎನ್‌ಡಿಎ ಗೆಲ್ಲುವುದು ಖಚಿತ. ಅಬ್ ಕೀ ಬಾರ್ ಚಾರ್ ಸೌ ಪಾರ್’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ,
ಶನಿವಾರ ಸಂಜೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಸರಣಿ ಟ್ವೀಟ್ ಮಾಡಿರುವ ಅವರು, ‘ಹತ್ತು ವರ್ಷಗಳ ಹಿಂದೆ, ನಾವು ಅಧಿಕಾರ ವಹಿಸಿಕೊಳ್ಳುವ ಮೊದಲು, ಇಂಡಿಯಾ ಒಕ್ಕೂಟದ ದುರಾಡಡಳಿತದಿಂದಾಗಿ ಭಾರತದ ಜನರು ದ್ರೋಹ ಮತ್ತು ಭ್ರಮನಿರಸನಗೊಂಡಿದ್ದಾರೆ.
ಹಗರಣಗಳು ಮತ್ತು ನೀತಿ ಪಾರ್ಶ್ವವಾಯುಗಳಿಂದ ಯಾವುದೇ ಕ್ಷೇತ್ರವನ್ನು ಅವರು ಅಭಿವೃದ್ಧಿ ಹೊಂದಲು ಬಿಡಲಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಆದರೆ ನಾವು ಅಧಿಕಾರಕ್ಕೆ ಬಂದ ನಂತರ ನಮ್ಮ ರಾಷ್ಟ್ರವು ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ನಾವು 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಕೋಟಿಗಟ್ಟಲೆ ಜನರನ್ನು ಬಡತನದಿಂದ ಮುಕ್ತಗೊಳಿಸಿದ್ದೇವೆ.
ನಮ್ಮ ಯೋಜನೆಗಳು ಭಾರತದ ಎಲ್ಲಾ ಭಾಗಗಳನ್ನು ತಲುಪಿವೆ ಮತ್ತು ಆಡಳಿತ ಶುದ್ಧಿಯ ಒತ್ತು ಉತ್ತಮ ಫಲಿತಾಂಶಗಳನ್ನು ನೀಡಿದೆ’ ಎಂದಿದ್ದಾರೆ.
‘ದೃಢಸಂಕಲ್ಪ, ಕೇಂದ್ರೀಕೃತ ಮತ್ತು ಫಲಿತಾಂಶ ಆಧಾರಿತ ಸರ್ಕಾರ ಏನು ಮಾಡಬಹುದೆಂಬುದನ್ನು ಭಾರತದ ಜನರು ನೋಡುತ್ತಿದ್ದಾರೆ. ಮತ್ತು, ಅವರು ಅದರಲ್ಲಿ ಹೆಚ್ಚಿನದನ್ನು ಬಯಸುತ್ತಿದ್ದಾರೆ.
ಅದಕ್ಕಾಗಿಯೇ ಭಾರತದ ಮೂಲೆ ಮೂಲೆಯಿಂದ, ಸಮಾಜದ ಎಲ್ಲ ವರ್ಗಗಳ ಜನರು ಒಂದೇ ಧ್ವನಿಯಲ್ಲಿ ಅಬ್ ಕಿ ಬಾರ್, 400 ಪಾರ್ ಎನ್ನುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ನಮ್ಮ ವಿರೋಧಿಗಳು ನಮ್ಮನ್ನು ನಿಂದಿಸಬಹುದು ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡಬಹುದು. ಇಂತಹ ನಾಯಕತ್ವ ಜನರಿಗೆ ಬೇಕಾಗಿಲ್ಲ’ ಎಂದು ವಿಪಕ್ಷಗಳನ್ನು ಟೀಕಿಸಿದ್ದಾರೆ
‘ನಮ್ಮ ಮೂರನೇ ಅವಧಿಯಲ್ಲಿ, ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕಳೆದ ದಶಕವು 70 ವರ್ಷಗಳ ಕಾಲ ಆಳಿದವರು ಬಿಟ್ಟು ಹೋದ ಅಭಿವೃದ್ಧಿಯ ಕಂದಕವನ್ನು ತುಂಬಲು ಯತ್ನಿಸಿದೆ.
ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಯುದ್ಧವು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗುವುದು.
ಭಾರತವನ್ನು 3ನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ. ಯುವಕರ ಕನಸುಗಳನ್ನು ನನಸು ಮಾಡುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ’ ಎಂದು ತಮ್ಮ ದೂರದೃಷ್ಟಿತ್ವ ಬಿಚ್ಚಿಟ್ಟಿದ್ದಾರೆ.
ಮುಂಬರುವ ಐದು ವರ್ಷಗಳು ಮುಂದಿನ ಸಾವಿರ ವರ್ಷಗಳವರೆಗಿನ ರಾಷ್ಟ್ರದ ಪಥವನ್ನು ರೂಪಿಸಲಿವೆ. ಜನರ ಆಶೀರ್ವಾದ- ಅದರಲ್ಲೂ ವಿಶೇಷವಾಗಿ - ಬಡವರು, ನಮ್ಮ ರೈತರು, ಯುವ ಮತ್ತು ನಾರಿ ಶಕ್ತಿಯಿಂದ ನಾನು ಹೆಚ್ಚಿನ ಶಕ್ತಿಯನ್ನು ಪಡೆಯುತ್ತೇನೆ.
ಅವರು ‘ಮೈ ಹೂಂ ಮೋದಿ ಕಾ ಪರಿವಾರ’ ಎಂದು ಹೇಳಿದಾಗ, ಅದು ನನ್ನಲ್ಲಿ ಸಂತೋಷವನ್ನು ತುಂಬುತ್ತದೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ನನ್ನನ್ನು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ. ನಾವೆಲ್ಲರೂ ಸೇರಿ ಒಟ್ಟಾಗಿ ಅಂದುಕೊಂಡಿದ್ದನ್ನು ಸಾಧಿಸೋಣ’ ಎಂದಿದ್ದಾರೆ.