ಕಾಶ್ಮೀರಿ ಪಂಡಿತರನ್ನು ಬೆದರಿಸುತ್ತಿದ್ದ ಉಗ್ರ ಪಾಕಲ್ಲಿ ನಿಗೂಢ ಹತ್ಯೆ!

| Published : Apr 26 2024, 06:36 AM IST

Pakistani terrorist pics

ಸಾರಾಂಶ

ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ಬಿಟ್ಟು ತೆರಳುವಂತೆ ಬೆದರಿಕೆ ಹಾಕುವುದಕ್ಕೆ ಕುಖ್ಯಾತಿ ಪಡೆದಿದ್ದ ಲಷ್ಕರ್‌-ಎ-ಇಸ್ಲಾಮ್‌ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ ಹಾಜಿ ಅಕ್ಬರ್‌ ಅಫ್ರಿದಿ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

ಇಸ್ಲಾಮಾಬಾದ್‌: ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ಬಿಟ್ಟು ತೆರಳುವಂತೆ ಬೆದರಿಕೆ ಹಾಕುವುದಕ್ಕೆ ಕುಖ್ಯಾತಿ ಪಡೆದಿದ್ದ ಲಷ್ಕರ್‌-ಎ-ಇಸ್ಲಾಮ್‌ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ ಹಾಜಿ ಅಕ್ಬರ್‌ ಅಫ್ರಿದಿ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

ಇದರೊಂದಿಗೆ, ಇತ್ತೀಚಿನ ತಿಂಗಳಲ್ಲಿ ಭಾರತಕ್ಕೆ ಬೇಕಾದ ಉಗ್ರರು ವಿದೇಶಿ ನೆಲದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಗಳ ಸಂಖ್ಯೆ 25ಕ್ಕೆ ಏರಿಕೆಯಾದಂತಾಗಿದೆ.

ಪಾಕಿಸ್ತಾನದ ಖೈಬರ್‌ ಜಿಲ್ಲೆಯ ಬಾರಾ ಎಂಬಲ್ಲಿ ಈ ಹತ್ಯೆ ನಡೆದಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಹಿಂಸಾಚಾರ ಹಾಗೂ ಭಯೋತ್ಪಾದನೆ ಹೆಚ್ಚುವ ಆತಂಕ ಸೃಷ್ಟಿಯಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಹಾಜಿ ಅಕ್ಬರ್‌ ಅಫ್ರಿದಿ ಕಮಾಂಡರ್‌ ಆಗಿದ್ದ ಲಷ್ಕರ್‌-ಎ-ಇಸ್ಲಾಮ್‌ ಸಂಘಟನೆ ತನ್ನ ಕಟ್ಟರ್‌ ಸಿದ್ಧಾಂತ ಹಾಗೂ ಬೇರೆ ಬೇರೆ ಸಮುದಾಯಗಳಿಗೆ ಬೆದರಿಕೆ ಹಾಕುವುದಕ್ಕೆ ಕುಖ್ಯಾತಿ ಪಡೆದಿದೆ. ಈ ಹಿಂದೆ ಕಾಶ್ಮೀರಿ ಪಂಡಿತರಿಗೆ, ‘ಕಾಶ್ಮೀರ ಬಿಟ್ಟು ಹೋಗಿ, ಇಲ್ಲವೇ ಪರಿಣಾಮ ಎದುರಿಸಿ’ ಎಂದು ಬೆದರಿಕೆ ಹಾಕಿದ ಕುಖ್ಯಾತಿಯೂ ಇದಕ್ಕಿದೆ. ಈ ಸಂಘಟನೆಯ ಬೆದರಿಕೆಯ ಪರಿಣಾಮ ಕಾಶ್ಮೀರದಿಂದ ಪಂಡಿತರು ಸಾಮೂಹಿಕವಾಗಿ ವಲಸೆ ಹೋಗುವಂತಾಗಿತ್ತು. 2014ರ ಬಳಿಕ ಹಾಜಿ ಅಕ್ಬರ್‌ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈತನ ಹತ್ಯೆಯು ಭಾರತವಿರೋಧಿ ಪಾಕ್‌ ಉಗ್ರರ ವಲಯದಲ್ಲಿ ನಡುಕ ಹುಟ್ಟಿಸಿದೆ ಎಂದು ವರದಿಯಾಗಿದೆ.