ನವದೆಹಲಿ: ಹೈಕೋರ್ಟ್‌ಗೆ ನಿವೃತ್ತ ನ್ಯಾಯಾಧೀಶರ ನೇಮಕಕ್ಕೆ ಸುಪ್ರೀಂಕೋರ್ಟ್‌ ಅನುಮತಿ

| N/A | Published : Feb 01 2025, 12:03 AM IST / Updated: Feb 01 2025, 05:10 AM IST

ಸಾರಾಂಶ

ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರನ್ನು ಮರಳಿ ಹೈಕೋರ್ಟ್‌ಗಳಿಗೆ ನೇಮಕ ಮಾಡಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ.

ನವದೆಹಲಿ: ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರನ್ನು ಮರಳಿ ಹೈಕೋರ್ಟ್‌ಗಳಿಗೆ ನೇಮಕ ಮಾಡಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ದೇಶಾದ್ಯಂತ ಉಚ್ಚ ನ್ಯಾಯಾಲಯಗಳಲ್ಲಿ ಸುಮಾರು 62 ಲಕ್ಷ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ಸುಪ್ರೀಂಕೋರ್ಟ್‌ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಈ ನಿರ್ಧಾರದ ಅನ್ವಯ, ಕ್ರಿಮಿನಲ್‌ ಕೇಸ್‌ಗಳ ವಿಚಾರಣೆಗಾಗಿ ಪ್ರತಿ ಹೈಕೋರ್ಟ್‌ಗೆ ಗರಿಷ್ಠ 5 ನಿವೃತ್ತ ನ್ಯಾಯಮೂರ್ತಿಗಳ ಮರುನೇಮಕ ಮಾಡಬಹುದಾಗಿದೆ. ನಿವೃತ್ತ ನ್ಯಾಯಮೂರ್ತಿಗಳು ಹೈಕೋರ್ಟ್‌ನ ಹಾಲಿ ವಿಚಾರಣಾ ಪೀಠದ ಭಾಗವಾಗಬಹುದೇ ಹೊರತು ಪೀಠದ ನೇತೃತ್ವ ವಹಿಸುವಂತಿಲ್ಲ. ಅಲ್ಲದೆ, ನಿವೃತ್ತ ನ್ಯಾಯಮೂರ್ತಿಗಳ ಪ್ರಮಾಣವು ಹೈಕೋರ್ಟ್‌ನಲ್ಲಿ ನೇಮಕಕ್ಕೆ ಅನುಮತಿ ಇರುವ ನ್ಯಾಯಮೂರ್ತಿಗಳ ಸಂಖ್ಯೆಯ ಶೇ.10ರಷ್ಟನ್ನು ದಾಟುವಂತಿಲ್ಲ.

ಸಂವಿಧಾನದ 224ಎ ಕಲಂ ಅಡಿ ಇರುವ ಅಧಿಕಾರ ಬಳಸಿಕೊಂಡು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರ ಮರುನೇಮಕಕ್ಕೆ ಅನುಮತಿ ನೀಡಿದ್ದು, ಈ ಕಲಂನಡಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ನಿವೃತ್ತ ನ್ಯಾಯಮೂರ್ತಿಗಳನ್ನು ಮರು ನೇಮಕ ಮಾಡಿಕೊಳ್ಳಬಹುದಾಗಿದೆ.

ಈ ಹಿಂದಿನ ಕೆಲಸಗಳ ಆಧಾರದ ಮೇಲೆ ನಿವೃತ್ತ ನ್ಯಾಯಾಧೀಶರ ಹೆಸರನ್ನು ಹೈಕೋರ್ಟ್‌ನ ಕೊಲಿಜಿಯಂಗಳು ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ಶಿಫಾರಸು ಮಾಡಬಹುದು. ಆ ಪಟ್ಟಿಯಲ್ಲಿ ಸೂಕ್ತರನ್ನು ಆಯ್ಕೆ ಮಾಡಿ ಹೈಕೋರ್ಟ್‌ಗೆ ಮರು ನೇಮಕ ಮಾಡಲಾಗುತ್ತದೆ. ಈ ರೀತಿ ನೇಮಕಗೊಂಡ ನಿವೃತ್ತ ನ್ಯಾಯಾಧೀಶರ ಅಧಿಕಾರಾವಧಿ ನಿರ್ದಿಷ್ಟ ಅವಧಿ ಅಥವಾ ನಿರ್ದಿಷ್ಟ ಉದ್ದೇಶ(ನಿರ್ದಿಷ್ಟ ಪ್ರಕರಣಗಳ ಇತ್ಯರ್ಥ)ಕ್ಕೆ ಸೀಮಿತವಾಗಿರಲಿದೆ.