ದೀದಿ ಕರೆದ ಸಭೆಯಲ್ಲಿ ನಿರ್ಧಾರ
ಆದರೆ ಸಭೆಗೆ ಕೇವಲ 8 ಶಾಸಕರು, 6 ಸಂಸದರು ಹಾಜರುಕೋಲ್ಕತಾ: ಟಿಎಂಸಿ ಉಚ್ಚಾಟಿತ ಶಾಸಕ ಋತಬ್ರತ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ (ವಿಪಕ್ಷ ನಾಯಕ) ಆಯ್ಕೆ ಮಾಡಿದ ಸ್ಪೀಕರ್ ರತೀಂದ್ರ ಬೋಸ್ ಅವರ ನಿರ್ಧಾರವನ್ನು ಪ್ರಶ್ನಿಸಿ ಟಿಎಂಸಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
ಕೋಲ್ಕತಾದ ಕಾಳಿಘಾಟ್ ನಿವಾಸದಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ತೃಣಮೂಲ ಕಾಂಗ್ರೆಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.ಪಕ್ಷದಿಂದ ವಜಾ ಆಗಿದ್ದ ಋತಬ್ರತ 58 ಶಾಸಕರ ಸಹಿಯುಳ್ಳ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದ್ದರು. ಹೀಗಾಗಿ ಅವರನ್ನೇ ಟಿಎಂಸಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸ್ಪೀಕರ್ ಮಾನ್ಯ ಮಾಡಿದ್ದರು. ಮಮತಾ ಸೂಚಿಸಿದ್ದ ಶೋಭನ್‌ದೇಬ್ ಚಟ್ಟೋಪಾಧ್ಯಾಯ ಹೆಸರನ್ನು ತಿರಸ್ಕರಿಸಿದ್ದರು.
ಕೇವಲ 8 ಶಾಸಕರು. 6 ಸಂಸದರು ಹಾಜರು:
ಶುಕ್ರವಾರ ಮಮತಾ ಕರೆದ ಸಭೆಗೆ ಕೇವಲ 8 ಶಾಸಕರು ಹಾಗೂ 6 ಸಂಸದರು ಮಾತ್ರ ಹಾಜರಾಗಿದ್ದರು ಬಹುತೇಕ ಸಂಸದರು ಗೈರಾಗಿದ್ದರು ಎಂದು ಗೊತ್ತಾಗಿದೆ.
==ಮಮತಾ ವಿರೋಧಿ ಬಣಕ್ಕೆ 23 ಟಿಎಂಸಿ ಸಂಸದರು?
ಕೋಲ್ಕತಾ: ಬಂಗಾಳ ಹೀನಾಯ ಸೋಲಿನ ಬಳಿಕ ಮಾಜಿ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಪಕ್ಷದೊಳಗಿನ ಬಂಡಾಯವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉಚ್ಚಾಟಿತ ಶಾಸಕ ಋತಬ್ರತ ಬ್ಯಾನರ್ಜಿ ಅವರ ಬಣದೊಂದಿಗೆ 58 ಶಾಸಕರು ಗುರುತಿಸಿಕೊಂಡಿರುವ ನಡುವೆ ಇದೀಗ 23 ಸಂಸದರೂ ಆ ಬಣದ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಹಲವು ಟಿಎಂಸಿ ಸಂಸದರು, ದೀದಿ ಸೋದರಳಿಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಡೆಯಿಂದ ಅತೃಪ್ತರಾಗಿದ್ದಾರೆ,. ಇದೇ ಕಾರಣದಿಂದ ಪ್ರತೇಕ ಬಣದ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.ಈ ಮೂಲಕ ವಿಧಾನಸಭೆಯಲ್ಲಿ ಆದಂತೆ ಲೋಕಸಭೆಯಲ್ಲಿಯೂ ಟಿಎಂಸಿ ಇಬ್ಭಾಗವಾಗಬಹುದು ಅಂತಲೂ ವಿಶ್ಲೇಷಿಸಲಾಗುತ್ತಿದೆ. ಟಿಎಂಸಿಯಲ್ಲಿ ಸದ್ಯ 29 ಲೋಕಸಭಾ ಸಂಸದರಿದ್ದಾರೆ. ನಿಯಮಗಳ ಅಡಿ ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಲು ಕನಿಷ್ಠ 22 ಸಂಸದರ ಅಗತ್ಯವಿದೆ.
ಇನ್ನು ರಾಜ್ಯಸಭೆಯಲ್ಲಿ ಟಿಎಂಸಿಯಲ್ಲಿ 13 ಸಂಸದರಿದ್ದಾರೆ. ಪ್ರತ್ಯೇಕ ಬಣ ಆಗಲು ಅಲ್ಲಿ 9 ಸಂಸದರು ಅಗತ್ಯ.