ಸರ್ಕಾರ ಉರುಳಿಸಿ, ಇಸ್ಲಾಮಿಕ್ ಖ್ಯಾಲಿಪೇಟ್ ಸ್ಥಾಪಿಸಲು ಸಂಚುನವದೆಹಲಿ: 2047ರ ವೇಳೆಗೆ ಭಾರತ ಸರ್ಕಾರವನ್ನು ಉರುಳಿಸಿ ಇಸ್ಲಾಮಿಕ್ ಖ್ಯಾಲಿಫೇಟ್ ಸ್ಥಾಪಿಸುವ ಷಡ್ಯಂತ್ರದ ಬಗ್ಗೆ ಗಂಭೀರ ಅನುಮಾನ ಇರುವ ಹಿನ್ನೆಯಲ್ಲಿ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಹಾಗೂ ಅದರ 25 ಉನ್ನತ ನಾಯಕರ ವಿರುದ್ಧ ದೋಷಾರೋಪ ಹೊರಿಸಲು ದೆಹಲಿಯ ಎನ್‌ಐಎ ಕೋರ್ಟ್ ಶುಕ್ರವಾರ ಆದೇಶಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ, 25 ಪಿಎಫ್‌ಐ ಸದಸ್ಯರು ಮತ್ತು ಸಂಘಟನೆಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ದೋಷಾರೋಪಗಳನ್ನು ರೂಪಿಸಲು ಆದೇಶಿಸಿದ್ದಾರೆ.‘ಒಟ್ಟಾರೆಯಾಗಿ ನೋಡಿದರೆ, ದಾಖಲೆಗಳಲ್ಲಿ ಇರುವ ಎಲ್ಲಾ ಸಾಕ್ಷ್ಯಗಳು ತುಂಬಾ ಗಂಭೀರ ಅನುಮಾನವನ್ನು ಉಂಟುಮಾಡುತ್ತವೆ. ಆರೋಪಿಗಳು ಪಿಎಫ್‌ಐ ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಪರವಾಗಿ ಕಾರ್ಯನಿರ್ವಹಿಸುತ್ತಾ, ಭಾರತದ ಪ್ರಜಾಪ್ರಭುತ್ವ ಸರ್ಕಾರವನ್ನು ಕಿತ್ತುಹಾಕಿ, 2047 ಅಥವಾ ಅದಕ್ಕೂ ಮುಂಚೆ ಭಾರತದಲ್ಲಿ ಶರಿಯಾ ಕಾನೂನು ಆಧರಿತ ಇಸ್ಲಾಮಿಕ್ ಖ್ಯಾಲಿಫೇಟ್ ಸ್ಥಾಪಿಸುವುದಕ್ಕಾಗಿ ದೇಶದ ವಿರುದ್ಧ ಸಶಸ್ತ್ರ ಹೋರಾಟ ಮಾಡುವ ಸಂಚು ರೂಪಿಸಿ, ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ’ ಎಂದು ಜಡ್ಜ್ ತಿಳಿಸಿದ್ದಾರೆ.2022ರ ಸೆಪ್ಟೆಂಬರ್‌ನಲ್ಲಿ, ಐಸಿಸ್ ಮುಂತಾದ ಉಗ್ರ ಸಂಘಟನೆಗಳ ನಂಟಿನ ಆರೋಪ ಹೊರಿಸಿ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸಿತ್ತು.
==ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಗೆ 20 ಸಲ ಇರಿದು ಕೊಂದ ಪಾಗಲ್ ಪ್ರೇಮಿ
ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಾನ್
ಚಂಡೀಗಢ: ಪಂಜಾಬ್‌ನ ಮೊಹಾಲಿಯಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು ಕಚೇರಿಯಲ್ಲೇ 20 ಸಲ ಇರಿದು ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಡಿಂಪಲ್ ಎನ್ನುವ ಮಹಿಳೆ ಕೊಲೆಯಾದಾಕೆ. ಆಕೆಯನ್ನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹರ್ವಿಂದರ್ ಮಾನ್ ಎಂಬಾತ ಇರಿದು ಕೊಂದಿರುವ ಪಾಪಿ.ಪ್ರಾಥಮಿಕ ಮೂಲಗಳ ಮಾಹಿತಿ ಪ್ರಕಾರ, ಡಿಂಪಲ್ ಮತ್ತು ಮಾನ್ ಪ್ರೀತಿಯಲ್ಲಿದ್ದರು. ಆದರೆ ಕೆಲ ತಿಂಗಳ ಹಿಂದಷ್ಟೇ ಇಬ್ಬರೂ ಬೇರ್ಪಟ್ಟಿದ್ದರು. ಆ ಬಳಿಕ ಮಾನ್ ಆಕೆಯನ್ನು ಮತ್ತೆ ಮಾತನಾಡಲು ಪ್ರಯತ್ನಿಸಿದ್ದಾನೆ, ಆದರೆ ಅದಕ್ಕೆ ಆತ ಒಪ್ಪಿರಲಿಲ್ಲ. ಹೀಗಾಗಿ ಇದೇ ಕಾರಣದಿಂದ ಸಿಟ್ಟಿಗೆದ್ದು ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.ಹಲ್ಲೆಯ ಭೀಕರ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಕೆಲಸ ಮಾಡುತ್ತಿದ್ದ ಡಿಂಪಲ್‌ಗೆ ಏಕಾಏಕಿ ಮಾನ್ ಇರಿದಿದ್ದಾನೆ . ಆಕೆ ಅದರಿಂದ ಪಾರಾಗಲು ಯತ್ನಿಸಿದಾಗ ಆತ ಆಕೆಯ ಕೂದಲು ಹಿಡಿದು ಎಳೆದಾಡಿ ಇರಿದಿದ್ದಾನೆ. ಈ ಸಂದರ್ಭದಲ್ಲಿ ಪಾಳಿ ಬದಲಾವಣೆಯ ಸಮಯ ಆಗಿದ್ದರಿಂದ ಕಚೇರಿಯಲ್ಲಿಯೂ 4-5 ಮಾತ್ರವೇ ಇದ್ದರು. ಅವರು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಇನ್ನು ಡಿಂಪಲ್‌ಗೆ ಇರಿದ ಬಳಿಕ ತಾನು ಕೂಡ ಗಂಟಲಿಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಡಿಂಪಲ್ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು. ಸದ್ಯ ಮಾನ್‌ಗೆ ಚಿಕಿತ್ಸೆ ಮುಂದುವರೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
==ಅಂಡಮಾನ್ ಕಡಲಲ್ಲಿ ನೈಸರ್ಗಿಕ ಅನಿಲ ಪತ್ತೆ
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ದೇಶ ಕಚ್ಚಾತೈಲದ ಜತೆ ನೈಸರ್ಗಿಕ ಇಂಧನದ ಕೊರತೆಯನ್ನೂ ಎದುರಿಸುತ್ತಿರುವ ಹೊತ್ತಿನಲ್ಲಿ ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲವಿರುವ ಇನ್ನೊಂದು ಬಾವಿಯನ್ನು ಆಯಿಲ್ ಇಂಡಿಯಾ ಲಿ. ಪತ್ತೆ ಮಾಡಿದೆ.ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಅಂಡಮಾನ್ ದ್ವೀಪದ ಪೂರ್ವ ಕರಾವಳಿಯಿಂದ 15 ಕಿ.ಮೀ. ದೂರದಲ್ಲಿ ತೋಡಲಾದ ಶ್ರೀ ವಿಜಯಪುರಂ-3 ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. 1900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿರುವ ಬಾವಿಯಲ್ಲಿ ಅನಿಲದ ಉಪಸ್ಥಿತಿಯನ್ನು ಉರಿಯುವಿಕೆಯ ಮೂಲಕ ಖಚಿತಪಡಿಸಿಕೊಳ್ಳಲಾಯಿತು’ ಎಂದು ಬರೆದುಕೊಂಡಿದ್ದಾರೆ.ಅನಿಲ ಪತ್ತೆಗೆಂದು ಅಂಡಮಾನ್ ಸಮುದ್ರದಲ್ಲಿ 3 ಬಾವಿಗಳನ್ನು ತೋಡಲಾಗಿದ್ದು, ಅನಿಲ ಪತ್ತೆಯಾದ 2ನೇ ಬಾವಿ ಇದಾಗಿದೆ.
==ನೋಟು ರದ್ದತಿ ಬಳಿಕ ವಂಚನೆಯ ₹6 ಕೋಟಿ ನೋಟು ಸುಟ್ಟಿದ್ದ ವ್ಯಕ್ತಿ!
ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಕೇಸ್
ವಿಚಾರಣೆ ವೇಳೆ ಆರೋಪಿಯಿಂದ ತಪ್ಪೊಪ್ಪಿಗೆ
ತಿರುವನಂತಪುರಂ: ‘2016ರ ನೋಟು ರದ್ದತಿ ನಂತರ ಲಾಟರಿ ಕಲ್ಯಾಣ ನಿಧಿಯಿಂದ ಲಪಟಾಯಿಸಿದ ಹಣವನ್ನು ಬಳಸಲು ಸಾಧ್ಯವಾಗಲಿಲ್ಲ. ಹೀಗಾಗಿ 6 ಕೋಟಿ ರು. ಮೌಲ್ಯದ ನೋಟುಗಳನ್ನು ಸುಟ್ಟುಹಾಕಿದೆ’ ಎಂಬ ಆಘಾತಕಾರಿ ಮಾಹಿತಿಯನ್ನು ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.ಸಂಗೀತ್ ಲಾಟರಿ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾದ ಸುಮಾರು 14 ಕೋಟಿ ರು.ಗಳನ್ನು ನಕಲಿ ಸಹಿಗಳನ್ನು ಬಳಸಿ ಸ್ವಂತ ಖಾತೆಗೆ ವರ್ಗಾಯಿಸಿಕೊಂಡ ಆರೋಪ ಹೊತ್ತಿದ್ದಾನೆ.ವಿಚಕ್ಷಣ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ಈತ, ‘ನೋಟು ರದ್ದತಿಗೂ ಮುನ್ನ ಕಲ್ಯಾಣ ನಿಧಿ ಖಾತೆಗಳಿಂದ 500 ಮತ್ತು 1,000 ರು. ನೋಟುಗಳನ್ನು ಪಡೆದಿದ್ದೆ. ಕೇಂದ್ರ ಸರ್ಕಾರ ನೋಟುಗಳನ್ನು ರದ್ದುಗೊಳಿಸಿತು. ಆ ನಂತರ ಹಣವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ 2017ರಲ್ಲಿ ಪೊಂಗುಮ್ಮೂಡುವಿನ ಮನೆಯಲ್ಲಿ ಹಣವನ್ನು ಸುಟ್ಟುಹಾಕಿದೆ’ ಎಂದು ಒಪ್ಪಿಕೊಂಡಿದ್ದಾನೆ.