-ಪಾಲಿಮರ್ ನೋಟು ಜಾರಿ ಬಗ್ಗೆ ಪರಿಶೀಲನೆ: ಮಲ್ಹೋತ್ರಾಮುಂಬೈ: ಪಾಲಿಮರ್ ನೋಟುಗಳನ್ನು ಪರಿಚಯಿಸುವ ಪ್ರಸ್ತಾಪವು ಕೇಂದ್ರೀಯ ಬ್ಯಾಂಕ್‌ನ ಪರಿಗಣನೆಯಲ್ಲಿದೆ. ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡ ತಕ್ಷಣ, ಮಾಹಿತಿ ನೀಡುತ್ತೇವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಶುಕ್ರವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತು ಮಾಧ್ಯಮ ವರದಿಗಳು ತಿಳಿಸಿರುವುದು ಸ್ವಲ್ಪ ನಿಜ. ಆದರೆ ಕೇಂದ್ರೀಯ ಬ್ಯಾಂಕ್ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಪ್ರಸ್ತಾಪ ಪ್ರಾಥಮಿಕ ಹಂತದಲ್ಲಿದೆ. ಈ ಬಗ್ಗೆ ನಿರ್ಧಾರ ತೆಗೆದುಕೊಂಡ ಬಳಿಕ ತಿಳಿಸುತ್ತೇವೆ’ ಎಂದರು.

ಏನಿದು ಪಾಲಿಮರ್‌ ನೋಟು?ಪಾಲಿಮರ್ ನೋಟುಗಳು ಎಂದರೆ ತೆಳುವಾದ ಮತ್ತು ಸುಲಭವಾಗಿ ಮಡಚಬಹುದಾದ ಪ್ಲಾಸ್ಟಿಕ್‌ ನೋಟುಗಳು. ಕಾಗದದ ನೋಟುಗಳ ಮುದ್ರಣ ವೆಚ್ಚ ಗಗನಕ್ಕೇರುತ್ತಿರುವುದು ಮತ್ತು ಪ್ರತಿ ವರ್ಷ ಕೋಟ್ಯಂತರ ಹರಿದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಈ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ.

--

2014ರಲ್ಲಿ, ಭೌಗೋಳಿಕ ವೈವಿಧ್ಯ ಹೊಂದಿರುವ 5 ನಗರಗಳಲ್ಲಿ ಪ್ರಾಯೋಗಿಕವಾಗಿ 10 ರು. ಮುಖಬೆಲೆಯ 100 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಾಗುವುದು ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತ್ತು. ಇದಕ್ಕಾಗಿ ಮೈಸೂರು, ಕೊಚ್ಚಿ, ಜೈಪುರ, ಶಿಮ್ಲಾ ಮತ್ತು ಭುವನೇಶ್ವರ ನಗರಗಳನ್ನು ಆಯ್ಕೆ ಮಾಡಿತ್ತು.