- ಉಚ್ಚಾಟಿತ ಶಾಸಕ ಋತಬ್ರತಗೆ ವಿಪಕ್ಷ ನಾಯಕ ಮಾನ್ಯತೆ

- ಮಮತಾ ಸೂಚಿಸಿದ್ದ ಶೋಭನ್‌ದೇಬ್‌ ಹೆಸರಿಗೆ ನಕಾರ

- 80 ಶಾಸಕರಲ್ಲಿ ಋತಬ್ರತ ಬಲ 58 । ಹೀಗಾಗಿ ಅವರಿಗೆ ಮನ್ನಣೆ

- 28 ವರ್ಷದ ಇತಿಹಾಸದಲ್ಲೇ ಮೊದಲ ಬಾರಿ ದೀದಿ ಪಾರ್ಟಿ ಹೋಳು?

ಪಿಟಿಐ ಕೋಲ್ಕತಾಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಅಧಿಕಾರ ಕಳೆದುಕೊಂಡ ಟಿಎಂಸಿಯೊಳಗಿನ ಬಂಡಾಯ ಬುಧವಾರ ನಿರ್ಣಾಯಕ ತಿರುವು ಪಡೆದುಕೊಂಡಿದ್ದು, ತನ್ನ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬುಧವಾರ ಪಕ್ಷ ಬಹುತೇಕ ವಿಭಜನೆ ಆಗಿದೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ವಿರೋಧಿ ಶಾಸಕ ಋತಬ್ರತ ಬ್ಯಾನರ್ಜಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಎಂದು ಸ್ಪೀಕರ್ ರತೀಂದ್ರ ಬೋಸ್ ಮಾನ್ಯ ಮಾಡಿದ್ದಾರೆ.


ಇದರೊಂದಿಗೆ ಮಹಾರಾಷ್ಟ್ರದಲ್ಲಿ ಕೆಲವು ವರ್ಷ ಹಿಂದೆ ಎನ್‌ಸಿಪಿ ಹಾಗೂ ಶಿವಸೇನೆ ಇಭ್ಭಾಗವಾದ ಘಟನೆಗಳನ್ನು ನೆನಪಿಸಿದೆ. ಮೇಲಾಗಿ, ‘ನಮ್ಮದೇ ನಿಜವಾದ ಟಿಎಂಸಿ. ನಮ್ಮ ಪಕ್ಷದ ಅಧ್ಯಕ್ಷ ಮಮತಾ ಬ್ಯಾನರ್ಜಿ’ ಎಂದು ಬಂಡುಕೋರರು ಹೇಳಿದ್ದಾರೆ. ಹೀಗಾಗಿ ಇಂದಿನ ವಿದ್ಯಮಾನಕ್ಕೆ ಮಮತಾ ದೀದಿ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಆದರೆ ಸ್ಪೀಕರ್‌ ನಡೆ ವಿರುದ್ಧ ಟಿಎಂಸಿ ಕೋರ್ಟ್‌ಗೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬಂಡಾಯಕ್ಕೆ ಸಿಕ್ತು ಮಾನ್ಯತೆ:

ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ಒಡಕು ಮೂಡಲು ಆರಂಭವಾಗಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕರ ಆಯ್ಕೆ ಆದಾಗಿನಿಂದ. ಮಮತಾ ಆಪ್ತರಾದ ಶೋಭನ್‌ದೇಬ್‌ ಚಟ್ಟೋಪಾಧ್ಯಾಯ ಅವರು ಪಕ್ಷದ ಶಾಸಕಾಂಗ ನಾಯಕ ಎಂಬ ನಿರ್ಣಯ ಇತ್ತೀಚೆಗೆ ಅಂಗೀಕಾರವಾಗಿತ್ತು. ಆದರೆ ‘ಸಭೆ ನಡೆಸದೇ ಈ ಆಯ್ಕೆ ಮಾಡಲಾಗಿದೆ. ಅಲ್ಲದೆ, ನಿರ್ಣಯಕ್ಕೆ ತಮ್ಮ ನಕಲಿ ಸಹಿ ಬಳಸಲಾಗಿದೆ’ ಎಂದು ಶಾಸಕರಾದ ಋತಬ್ರತ ಬ್ಯಾನರ್ಜಿ ಹಾಗೂ ಸಂದೀಪನ್‌ ಸಾಹಾ ಸ್ಪೀಕರ್‌ಗೆ ದೂರಿದ್ದರು. ಹೀಗಾಗಿ ಶೋಭನ್‌ ಆಯ್ಕೆಯನ್ನು ಸ್ಪೀಕರ್‌ ಮಾನ್ಯ ಮಾಡಿರಲಿಲ್ಲ. ಇದರಿಂದ ಕುಪಿತರಾದ ಮಮತಾ, ಈ ಇಬ್ಬರನ್ನೂ ಪಕ್ಷದಿಂದ ಉಚ್ಚಾಟಿಸಿದ್ದರು.

ಆದರೆ ಇದರಿಂದ ಸಿಟ್ಟಿಗೆದ್ದ ಋತಬ್ರತ ಹಾಗೂ ಸಾಹಾ ಬುಧವಾರ ಬೆಳಗ್ಗೆ ಬಂಡಾಯ ಶಾಸಕರ ಸಭೆ ಆಯೋಜಿಸಿದ್ದರು. ಆಗ, ಟಿಎಂಸಿಯ ಅಧಿಕೃತ 80 ಶಾಸಕರ ಪೈಕಿ 58 ಶಾಸಕರು ಈ ಸಭೆಗೆ ಆಗಮಿಸಿ, ‘ಋತಬ್ರತ ಅವರೇ ನಮ್ಮ ನಾಯಕ. ಅವರಿಗೆ ವಿಪಕ್ಷ ನಾಯಕ ಎಂಬ ಮಾನ್ಯತೆ ನೀಡಬೇಕು. ನಮ್ಮದೇ ನಿಜವಾದ ಟಿಎಂಸಿ ಎಂದು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಕೋರಿಕೆ ಸಲ್ಲಿಸಿದ್ದರು. ವಿಚಿತ್ರವೆಂದರೆ ಮಮತಾ ನಿಲುವಿನ ವಿರುದ್ಧ ಬಂಡೆದ್ದರೂ ಮಮತಾ ಬ್ಯಾನರ್ಜಿ ಅವರನ್ನೇ ತಮ್ಮ ಅಧ್ಯಕ್ಷೆ ಎಂದು ಸ್ಪೀಕರ್‌ಗೆ ನೀಡಿರುವ ಪತ್ರದಲ್ಲಿ ಬಂಡಾಯ ಶಾಸಕರು ಬರೆದಿದ್ದರು.ಇದೇ ವೇಳೆ ಶಾಸಕಾಂಗ ಪಕ್ಷದ ನಾಯಕರಾಗಿ ಋತಬ್ರತ ಬ್ಯಾನರ್ಜಿ ಅಲ್ಲದೆ, ಉಪ ನಾಯಕರಾಗಿ ಜಾವೇದ್ ಖಾನ್, ಸಂದೀಪನ್ ಸಾಹಾ ಮತ್ತು ಶಿಯುಲಿ ಸಾಹಾ ಅವರನ್ನು ಮತ್ತು ಸಚೇತಕರಾಗಿ ರಘುನಾಥ್‌ಗಂಜ್ ಶಾಸಕ ಅಕ್ರುಝಮಾನ್ ಅವರನ್ನು ಸಭೆ ಆಯ್ಕೆ ಮಾಡಿತ್ತು.

ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ, ಅನರ್ಹತೆಯಿಂದ ಬಚಾವಾಗಲು ಬೇರ್ಪಟ್ಟ ಬಣಕ್ಕೆ ಶಾಸಕಾಂಗ ಪಕ್ಷದ ಕನಿಷ್ಠ 3ನೇ 2ರಷ್ಟು ಬೆಂಬಲ ಬೇಕಾಗುತ್ತದೆ. ಟಿಎಂಸಿ ವಿಧಾನಸಭೆಯಲ್ಲಿ 80 ಶಾಸಕರನ್ನು ಹೊಂದಿರುವುದರಿಂದ, 3/2 ಮಿತಿ 54 ಆಗಿದೆ. ಆದರೆ ಋತಬ್ರತ ಬಣ 58 ಶಾಸಕರ ಬೆಂಬಲ ಬೆಂಬಲ ತೋರಿಸಿದ ಕಾರಣ ಅನರ್ಹತೆಯ ಆಂಕ ಇರಲಿಲ್ಲ. ಹೀಗಾಗಿ ಆ ಬಣವನ್ನೇ ಅಧಿಕೃತ ಎಂದು ಪರಿಗಣಿಸಿದ ಸ್ಪೀಕರ್‌. ಅವರಿಗೆ ವಿಪಕ್ಷ ನಾಯಕ ಮಾನ್ಯತೆ ನೀಡಿದ್ದಾರೆ ಹಾಗೂ ವಿಧಾನಸೌಧದಲ್ಲಿನ ವಿಪಕ್ಷ ನಾಯಕ ಕೊಠಡಿಯ ಕೀಲಿಕೈ ಅನ್ನೂ ಹಸ್ತಾಂತರಿಸಿದ್ದಾರೆ.

ಮಮತಾ ನಮ್ಮ ಸಲಹೆಗಾರ್ತಿ:

ಸ್ಪೀಕರ್‌ರಿಂದ ಮಾನ್ಯತೆ ಸಿಕ್ಕ ಬಳಿಕ ಮಾತನಾಡಿದ ಋತಬ್ರತ, ‘ಮಮತಾ ನಮ್ಮ ಸಲಹೆಗಾರ್ತಿ ಆಗಿರಲಿ ಎಂದು ಕೋರುತ್ತೇವೆ’ ಎಂದರು.

ತನ್ನ ಎಲ್ಲ ಸಮಿತಿ ವಿಸರ್ಜಿಸಿದ ಟಿಎಂಸಿ

- ಎಲ್ಲ ಘಟಕಗಳ ಪುನಾರಚನೆ ನಿರ್ಧಾರ- ಶಾಸಕರ ಬಂಡಾಯ ಬೆನ್ನಲ್ಲೆ ಹೈಡ್ರಾಮಾ

ಪಿಟಿಐ ಕೋಲ್ಕತಾ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲಿ (ಟಿಎಂಸಿ) ಆಂತರಿಕ ಅಸಮಾಧಾನ ಭುಗಿಲೆದ್ದಿರುವ ನಡುವೆ, ಪಕ್ಷವು ತನ್ನ ಎಲ್ಲ ಸಾಂಸ್ಥಿಕ ಸಮಿತಿಗಳನ್ನು ಬುಧವಾರ ವಿಸರ್ಜಿಸಿದೆ ಹಾಗೂ ಎಲ್ಲ ಘಟಕಗಳ ಸಮಗ್ರ ಪುನಾರಚನೆ ಮಾಡುವುದಾಗಿ ಘೋಷಿಸಿದೆ.ಬಹುಸಂಖ್ಯೆಯಲ್ಲಿ ಟಿಎಂಸಿ ಶಾಸಕರು ಬಂಡಾಯ ಎದ್ದು ತಮಗೆ ಪ್ರತ್ಯೇಕ ಶಾಸಕಾಂಗ ಪಕ್ಷದ ಮಾನ್ಯತೆ ಕೋರಿ ವಿಧಾನಸಭಾ ಸ್ಪೀಕರ್‌ ಬಳಿ ಅರ್ಜಿ ಹಾಕಿದ್ದರು.ಇದರ ಬೆನ್ನಲ್ಲೇ ಟಿಎಂಸಿಯಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ.

‘ಪಕ್ಷದ ಎಲ್ಲ ಸಮಿತಿಗಳು, ಮುಂಚೂಣಿ ಸಂಸ್ಥೆಗಳು ತಕ್ಷಣದಿಂದ ವಿಸರ್ಜಿಸಲು ನಿರ್ಧರಿಸಲಾಗಿದೆ. ಪ್ರತಿ ಹಂತದಲ್ಲೂ ಸಮಗ್ರ ಆತ್ಮಾವಲೋಕನ, ಕಾರ್ಯಕ್ಷಮತೆಯ ವಿಮರ್ಶೆ, ಸಾಂಸ್ಥಿಕ ಮೌಲ್ಯಮಾಪನ ನಡೆಸಲಾಗುತ್ತದೆ’ ಎಂದು ಪಕ್ಷ ಹೇಳಿದೆ.ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲಿನ ಬಳಿಕ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಆಳವಾಗುತ್ತಿದೆ.