-ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ನಿರ್ಧಾರ

-ಕೇಂದ್ರ ಶಿಕ್ಷಣ ಸಚಿವ ಪ್ರಧಾನ್‌ ರಾಜೀನಾಮೆ ಆಗ್ರಹನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ ಕಾಕ್ರೋಚ್‌ ಜನತಾ ಪಾರ್ಟಿಯ (ಸಿಜೆಪಿ) ಸ್ಥಾಪಕ ಅಭಿಜಿತ್ ದೀಪ್ಕೆ ಶನಿವಾರ ಅಮೆರಿಕದಿಂದ ದೆಹಲಿಗೆ ಆಗಮಿಸಲಿದ್ದಾರೆ. ಆ ಬಳಿಕ ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಇದು ಸಿಜೆಪಿ ಸ್ಥಾಪನೆಯ ಬಳಿಕ ದೀಪ್ಕೆ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ. ಅವರು ಸದ್ಯ ಅಮೆರಿಕದ ಬಾಸ್ಟನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ‘ದೀಪ್ಕೆ ದೆಹಲಿಗೆ ಬಂದ ಬಳಿಕ ಪೊಲೀಸ್‌ ಠಾಣೆಗೆ ತೆರಳಿ ಪ್ರತಿಭಟನೆಗೆ ಅನುಮತಿ ಕೋರಲಾಗುವುದು. ಒಂದು ವೇಳೆ ಅನುಮತಿ ಸಿಗದಿದ್ದರೂ ನಾವು ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿಯೇ ತೀರುತ್ತೇವೆ’ ಎಂದು ಸಿಜೆಪಿ ಮುಖ್ಯ ವಕ್ತಾರ ಸೌರವ್‌ ದಾಸ್‌ ಶುಕ್ರವಾರ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಲು ಸಿಜೆಪಿ ಸ್ಥಾಪಿಸಲಾಗಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸುವುದು ಪ್ರತಿಭಟನೆಯ ಮುಖ್ಯ ಉದ್ದೇಶ.