ಪುಷ್ಪ-2 ಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತ ಪ್ರಕರಣ : ಪೊಲೀಸ್‌ ಠಾಣೆಗೆ ನಟ ಅಲ್ಲು ಹಾಜರು

| Published : Jan 06 2025, 01:01 AM IST / Updated: Jan 06 2025, 04:21 AM IST

ಸಾರಾಂಶ

ಹೈದರಾಬಾದ್‌: ಪುಷ್ಪ-2 ಚಿತ್ರ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಷರತ್ತಬದ್ಧ ಜಾಮೀನು ಪಡೆದಿರುವ ನಟ ಅಲ್ಲು ಅರ್ಜುನ್‌, ನಿಯಮದಂತೆ ಭಾನುವಾರ ಪೊಲೀಸರ ಎದುರು ಹಾಜರಾಗಿದ್ದಾರೆ.

ಹೈದರಾಬಾದ್‌: ಪುಷ್ಪ-2 ಚಿತ್ರ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಷರತ್ತಬದ್ಧ ಜಾಮೀನು ಪಡೆದಿರುವ ನಟ ಅಲ್ಲು ಅರ್ಜುನ್‌, ನಿಯಮದಂತೆ ಭಾನುವಾರ ಪೊಲೀಸರ ಎದುರು ಹಾಜರಾಗಿದ್ದಾರೆ.

ಪ್ರಕರಣದ 11ನೇ ಆರೋಪಿಯಾಗಿರುವ ಅಲ್ಲುಗೆ, 2 ತಿಂಗಳು ಅಥವಾ ಚಾರ್ಜ್‌ಶೀಟ್‌ ಫೈಲ್‌ ಆಗುವ ವರೆಗೆ(ಯಾವುದು ಮೊದಲು) ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 1ರ ಒಳಗೆ ಚಿಕ್ಕಡಪಲ್ಲಿ ಪೊಲೀಸ್‌ ಠಾಣಾಧಿಕಾರಿ ಮುಂದೆ ಹಾಜರಾಗಬೇಕು. ಕೋರ್ಟ್‌ಗೆ ತಿಳಿಸದೆ ವಿಳಾಸ ಬದಲಿಸಬಾರದು, ವಿದೇಶಕ್ಕೂ ಹೋಗಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿತ್ತು.

ಇದೇ ವೇಳೆ, ಘಟನೆಯಲ್ಲಿ ಗಾಯಗೊಂಡಿದ್ದ ಹುಡುಗನನ್ನು ಕಾಣಲು ಅಲ್ಲು ಆಸ್ಪತ್ರೆಗೆ ತೆರಳಲಿಚ್ಛಿಸಿದ್ದರು. ಆದರೆ ತಮ್ಮ ಭೇಟಿಯಿಂದ ಆಸ್ಪತ್ರೆಯಲ್ಲಿ ಜನಸಂದಣಿ ಆಗಬಹುದು ಎಂಬ ಕಾರಣ ಭೇಟಿ ರದ್ದುಗೊಳಿಸಿದರು.

ಛತ್ತೀಸಗಢದಲ್ಲಿ: 4 ನಕ್ಸಲರ ಹತ್ಯೆ, ಪೊಲೀಸ್‌ ಸಾವು

ಪಿಟಿಐ ದಂತೇವಾಡಛತ್ತೀಸಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಬಸ್ತರ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯು ನಾಲ್ವರು ಮಾವೋವಾದಿಗಳ ಎನ್‌ಕೌಂಟರ್‌ ಮಾಡಿದ್ದಾರೆ. ಮತ್ತೊಂದೆಡೆ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.

ಡಿಆರ್‌ಜಿ ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಜಂಟಿ ತಂಡವು ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಾರಾಯಣಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮಾದ್‌ನ ಅರಣ್ಯದಲ್ಲಿ ಶನಿವಾರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ನಕ್ಸಲರು ಹತರಾಗಿದ್ದಾರೆ. ಇದೇ ವೇಳೆ ಗುಂಡಿನ ಕಾಳಗದಲ್ಲಿ ಡಿಸ್ಟ್ರಿಕ್ ರಿಸರ್ವ್ ಗಾರ್ಡ್‌ನ ಮುಖ್ಯಪೇದೆ ಸನ್ನು ಕರಮ್ ಕೂಡ ಸಾವನ್ನಪ್ಪಿದ್ದಾರೆ.ಹತರಾದ ನಕ್ಸಲರಿಂದ ಎಕೆ- 47 ರೈಫಲ್‌ ಮತ್ತು ಸ್ವಯಂ ಲೋಡಿಂಗ್ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಛತ್ತೀಸಗಢದಲ್ಲಿ ಜ.3 ರಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಓರ್ವ ಮಾವೋವಾದಿ ಬಲಿಯಾಗಿದ್ದನು. ಕಳೆದ ವರ್ಷ ರಾಜ್ಯದಲ್ಲಿ 219 ನಕ್ಸಲರ ಎನ್‌ಕೌಂಟರ್‌ ನಡೆದಿತ್ತು.

ಅಯೋಧ್ಯೆ: ಜ.11ರಂದು ಬಾಲ ರಾಮನಿಗೆ ಯೋಗಿ ಅಭಿಷೇಕ

ಅಯೋಧ್ಯೆ: ಇಲ್ಲಿನ ಐತಿಹಾಸಿಕ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠೆಯಾಗಿ 1 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜ.11ರಿಂದ 13ರ ವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ (ಪ್ರತಿಷ್ಠಾ ದ್ವಾದಶಿ) ಆಯೋಜಿಸಲಾಗಿದೆ. ಇದರ ಪ್ರಯುಕ್ತ ಮೊದಲ ದಿನ(ಜ.11)ದಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಾಲ ರಾಮನಿಗೆ ಅಭಿಷೇಕ ನೆರವೇರಿಸಲಿದ್ದಾರೆ.ಇದೇ ವೇಳೆ, ಮಂದಿರದ ಸಮೀಪವಿರುವ ಅಂಗದ ಟೀಲಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಜತೆಗೆ, ಖ್ಯಾತ ಗಾಯಕರ ಭಕ್ತಿ ಗೀತೆಗಳೂ ಬಿಡುಗಡೆಗೊಳ್ಳಲಿವೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮಾತನಾಡಿ, ‘ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ಕೀರ್ತನೆಗಳನ್ನು ಆಯೋಜಿಸಲಾಗಿದೆ. ಮಂದಿರದ ಗರ್ಭಗುಡಿಯ ಬಳಿಯಿರುವ ಮಂಟಪದಲ್ಲಿ 3 ದಿನ ಶ್ರೀ ರಾಮ ರಾಗ ಸೇವೆ ನಡೆಯಲಿದೆ’ ಎಂದರು.ದೇಶಾದ್ಯಂತವಿರುವ ಸಂತರು ಹಾಗೂ ಭಕ್ತರಿಗೆ ಟ್ರಸ್ಟ್‌ ಈಗಾಗಲೇ ಆಮಂತ್ರಣ ಕಳಿಸಿದೆ.

ಬೀಡ್‌ ಸರಪಂಚ್‌ ಹತ್ಯೆ: ಎನ್‌ಸಿಪಿ ಅಜಿತ್‌ ಬಣ, ಬಿಜೆಪಿ ಮಧ್ಯೆ ಬಿರುಕು

ಮುಂಬೈ: ಮಹಾರಾಷ್ಟ್ರದ ಬೀಡ್‌ನಲ್ಲಿ ಸರಪಂಚ್‌ ಹತ್ಯೆ ಪ್ರಕರಣ ಬಳಿಕ ಆಡಳಿತಾರೂಢ ಬಿಜೆಪಿ ಮತ್ತು ಎನ್‌ಸಿಪಿ ಅಜಿತ್‌ ಪವಾರ್‌ ಬಣದ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ.ಪ್ರಕರಣದಲ್ಲಿ ಎನ್‌ಸಿಪಿಯ ಧನಂಜಯ ಮುಂಡೆ ಅವರ ಆಪ್ತ ವಾಲ್ಮಿಕ್‌ ಕರಾಡ್‌ ಅವರ ಬಂಧನವಾದ ಬಳಿಕ ಬಿಜೆಪಿಗರು ಅಜಿತ್‌ ಪವಾರ್‌ ಅವರನ್ನು ದೂಷಿಸಲು ಆರಂಭಿಸಿದ್ದರು. ‘ಧನಂಜಯ ಮುಂಡೆ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದಿದ್ದರು. ಈ ಬಗ್ಗೆ ಎನ್‌ಸಿಪಿ ನಾಯಕರಾದ ಸೂರಜ್‌ ಚವಾಣ್‌ ಹಾಗೂ ಅಮೋಲ್‌ ಮಿಟ್ಕಾರಿ ಪ್ರತಿಕ್ರಿಯಿಸಿ, ‘ಸಿಎಂ ಫಡ್ನವೀಸ್‌ ಅವರು ತಮ್ಮ ಪಕ್ಷದವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಕ್ಸ್‌ನಲ್ಲಿ ಕುಟುಕಿದ್ದಾರೆ.

ಇಂದು ಉಕ್ಕು ಉದ್ಯಮ ಪಿಎಲ್‌ಐ ಸ್ಕೀಂಗೆ ಎಚ್ಡಿಕೆ ಚಾಲನೆ

ನವದೆಹಲಿ: ಸ್ಟೀಲ್‌ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಎರಡನೇ ಹಂತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ ‘ಪಿಎಲ್‌ಐ ಸ್ಕೀಂ 1.1’ ಅನ್ನು ಸೋಮವಾರ ಘೋಷಿಸಲಿದೆ.ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ.

ಸ್ಟೆಷಾಲಿಟಿ ಸ್ಟೀಲ್‌ ಅನ್ನು ದೇಶೀಯವಾಗಿ ಉತ್ಪಾದಿಸುವುದು ಮತ್ತು ಹೂಡಿಕೆ ಆಕರ್ಷಿಸಿ ಆಮದನ್ನು ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಉಕ್ಕು ಕ್ಷೇತ್ರದ ಮೊದಲ ಹಂತದ ಪಿಎಲ್‌ಐ ಯೋಜನೆ ಈಗಾಗಲೇ 27,106 ಕೋಟಿ ರು. ಹೂಡಿಕೆ ಆಕರ್ಷಿಸಿದ್ದು, 14,760 ನೇರ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇದೆ. ಇದರ ಜತೆಗೆ 7.90 ದಶಲಕ್ಷ ಟನ್‌ ಸ್ಪೆಷಾಲಿಟಿ ಸ್ಟೀಲ್‌ ಉತ್ಪಾದನೆಗೆ ಕಾರಣವಾಗಲಿದೆ.ಪಿಎಲ್‌ಐ ಸ್ಕೀಂ 1ನಡಿ ಕಳೆದ ನವೆಂಬರ್‌ವರೆಗೆ ಕಂಪನಿಗಳು 18,300 ಕೋಟಿ ಹೂಡಿಕೆ ಮಾಡಿದ್ದು, 8,660 ಉದ್ಯೋಗ ಸೃಷ್ಟಿಸಿದೆ.

ಕೋವಿಡ್‌ ನಂತರ ಬಂಡವಾಳ ಆಕರ್ಷಿಸುವ ಮತ್ತು ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪ್ರಮುಖ ಕ್ಷೇತ್ರಗಳಲ್ಲಿ ಪಿಎಲ್‌ಐ ಸ್ಕೀಂ ಅನ್ನು ಜಾರಿಗೊಳಿಸಲಾಗಿದೆ.