ತಮ್ಮ ಮಕ್ಕಳಿಗೆ ಆಂಗ್ಲ ಭಾಷಾ ಶಿಕ್ಷಣ ಕೊಡಿಸುವ ಸಮಾಜವಾದಿ ಪಕ್ಷದ ನಾಯಕರು ಬೇರೆಯವರ ಮಕ್ಕಳನ್ನು ಕಟ್ಟರ್‌ ಮೌಲ್ವಿ ಮಾಡ್ತಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಕಾರಿದ್ದಾರೆ.

ಲಖನೌ: ತಮ್ಮ ಮಕ್ಕಳಿಗೆ ಆಂಗ್ಲ ಭಾಷಾ ಶಿಕ್ಷಣ ಕೊಡಿಸುವ ಸಮಾಜವಾದಿ ಪಕ್ಷದ ನಾಯಕರು ಬೇರೆಯವರ ಮಕ್ಕಳನ್ನು ಕಟ್ಟರ್‌ ಮೌಲ್ವಿ ಮಾಡ್ತಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಕಾರಿದ್ದಾರೆ. ವಿಧಾನಸಭೆಯ ಕಲಾಪ ಪ್ರಕ್ರಿಯೆಗಳನ್ನು ಉರ್ದುಗೂ ಅನುವಾದಿಸಬೇಕು ಎಂದು ಎಸ್ಪಿಯ ಮಾತಾ ಪ್ರಸಾದ್‌ ಪಾಂಡೆ ಬೇಡಿಕೆಗೆ ಉತ್ತರಿಸಿದ ಯೋಗಿ, ಅಖಿಲೇಶ್‌ ಅವರ ಪಕ್ಷಕ್ಕೆ ತಮ್ಮ ಮಕ್ಕಳು ಮಾತ್ರ ಇಂಗ್ಲಿಷ್‌ ಮಾಧ್ಯಮಕ್ಕೆ ಹೋಗಬೇಕು. ಬೇರೆ ಮಕ್ಕಳು ಉರ್ದು ಕಲಿಯಬೇಕು. ಈ ಮೂಲಕ ಅವರನ್ನು ಮೌಲ್ವಿಗಳನ್ನಾಗಿ ಮಾಡಿ ಕಟ್ಟರ್‌ ಇಸ್ಲಾಂವಾದಿಯನ್ನಾಗಿ ಮಾಡಬೇಕು ಎಂಬ ಆಸೆ. ಆದರೆ ನಾವು ಪ್ರಾದೇಶಿಕ ಭಾಷೆಗಳಾದ ಭೋಜಪುರಿ, ಅವಧಿ, ಬ್ರಜ್‌ ಮತ್ತು ಬಂಡೇಲಿ ಭಾಷೆಗೆ ಮಾತ್ರ ಅನುವಾದಿಸಿ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದರು.

==

ಚುನಾವಣೆ ಸೋತ ಆಪ್‌ನ ಸೌರಭ್‌ರಿಂದ ನಿರುದ್ಯೋಗಿ ನಾಯಕ ಚಾನೆಲ್‌ ಆರಂಭ

ನವದೆಹಲಿ: ಚುನಾವಣೆಯಲ್ಲಿ ಸೋತ ಬಳಿಕ ನಾಯಕರು ಏನಾಗುತ್ತಾರೆ ಎಂಬ ಪ್ರಶ್ನೆಗೆ ದೆಹಲಿ ಚುನಾವಣೆಯಲ್ಲಿ ಸೋತ ಆಪ್‌ನ ಸೌರಭ್ ಭಾರದ್ವಾಜ್ ನೀಡುವ ಉತ್ತರ ‘ನಿರುದ್ಯೋಗಿ ನಾಯಕ’! ಹೌದು. ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಸೋತಿದ್ದ ಸೌರಭ್‌, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಅದಕ್ಕೆ ‘ಬೆರೋಜಗಾರ್ ನೇತಾಜಿ’ (ನಿರುದ್ಯೋಗಿ ನಾಯಕ) ಎಂದು ಹೆಸರಿಟ್ಟಿದ್ದಾರೆ. ‘ದೆಹಲಿಯಲ್ಲಿ ಆಪ್ ಸೋತ ನಂತರ ತನ್ನಂತಹ ಅನೇಕ ಜನರ ಬದುಕು 180 ಡಿಗ್ರಿ ತಿರುಗಿದೆ. ಚುನಾವಣೆಯಲ್ಲಿ ಸೋತ ನಾಯಕರ ಬದುಕು ಏನಾಗುತ್ತದೆ ಎಂಬುದನ್ನು ತಿಳಿಸಲು ಯುಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ. ಈ ಚಾನೆಲ್‌ನ ಉದ್ದೇಶ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವುದು ಮತ್ತು ಅವರ ಪ್ರಶ್ನೆಗಳಿಗೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಉತ್ತರಿಸುವುದು’ ಎಂದು ತಮ್ಮ ಮೊದಲ ವಿಡಿಯೋದಲ್ಲಿ ತಿಳಿಸಿದ್ದಾರೆ.

==

ಕೇರಳದಲ್ಲಿ ಮತ್ತೊಂದು ಭೀಕರ ರ್‍ಯಾಗಿಂಗ್‌ ಪ್ರಕರಣ ಬೆಳಕಿಗೆ

ತಿರುವನಂತಪುರ: ಕೊಟ್ಟಾಯಂ ನರ್ಸಿಂಗ್‌ ಕಾಲೇಜಿನಲ್ಲಿ ನಡೆದ ಪೈಶಾಚಿಕ ರ್‍ಯಾಗಿಂಗ್‌ ಪ್ರಕರಣದ ಬೆನ್ನಲ್ಲೇ, ಕೇರಳದ ರಾಜಧಾನಿ ತಿರುವನಂತಪುರದ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿ ಮೇಲೆ 7 ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌ ನಡೆಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ತಿರುವನಂತಪುರದ ಕಾರ್ಯವಟ್ಟಂ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿ ಬಿನ್ಸ್‌ ಜೋಸ್‌ ಮಂಗಳವಾರ ಆರೋಪ ಮಾಡಿದ್ದು, ಕಾಲೇಜಿನ 7 ಜನರ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಫೆ.11ರಂದು ಕಾಲೇಜು ಆವರಣದಲ್ಲಿ ತನ್ನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ಕೊಠಡಿಯೊಂದಕ್ಕೆ ಕರೆದೊಯ್ದು ಚಿಲಕ ಹಾಕಿ, ನನ್ನ ಅಂಗಿ ತೆಗೆಸಿ ಮಂಡಿಗಾಲಲ್ಲಿ ಕೂರಿಸಿದರು. ನೀರು ಕೇಳಿದಾಗ ಮುಖಕ್ಕೆ ಉಗುಳಿದರು. ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದರು’ ಎಂದು ಜೋಸ್ ಹೇಳಿದ್ದಾರೆ. ಕಜಕೂಟಂ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

==

ಹಾರ್ವರ್ಡ್‌ ವಿವಿಯಲ್ಲಿ ಭಾರತದ ಹೆಮ್ಮೆ ಕುರಿತು ನೀತಾ ಅಂಬಾನಿ ಮಾತು

ಮುಂಬೈ: ರಿಲಯನ್ಸ್‌ ಫೌಂಡೇಷನ್‌ನ ಸಂಸ್ಥಾಪಕಿ ನೀತಾ ಅಂಬಾನಿ ಅವರು ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆದ 2025ರ ಭಾರತ ಸಮ್ಮೇಳನದಲ್ಲಿ ಭಾರತದ ಹೆಮ್ಮೆ ವಿಚಾರಗಳ ಕುರಿತು ಮಾತನಾಡಿದರು. ‘ಭಾರತದಿಂದ ಜಗತ್ತಿಗೆ’ ಎಂಬ ವಿಷಯದ ಮುಖ್ಯ ಭಾಷಣಕಾರರಾಗಿದ್ದ ಇವರು, ಶಿಕ್ಷಣ ಹಾಗೂ ಕ್ರೀಡೆಯಿಂದ ಸಂಸ್ಕೃತಿ, ದಾನ-ದತ್ತಿ ಮತ್ತು ತಂತ್ರಜ್ಞಾನದವರೆಗೆ ಭಾರತದ ಬೆಳೆಯುತ್ತಿರುವ ಜಾಗತಿಕ ಪ್ರಭಾವವನ್ನು ಒತ್ತಿ ಹೇಳಿದರು. ಯುವ ನಾಯಕರು ಮತ್ತು ಬದಲಾವಣೆ ತರುವವರಿಂದ ತುಂಬಿದ್ದ ಸಭಾಂಗಣದಲ್ಲಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಮಿತಿಗಳಿಲ್ಲದೆ ಕನಸು ಕಾಣಲು, ಉದ್ದೇಶದೊಂದಿಗೆ ಮುನ್ನಡೆಸಲು ಮತ್ತು ವಿಶ್ವ ವೇದಿಕೆಯಲ್ಲಿ ಭಾರತದ ಭವಿಷ್ಯವನ್ನು ರೂಪಿಸಲು ಸ್ಫೂರ್ತಿಯುತ ಮಾತುಗಳನ್ನಾಡಿದರು.