ಸಾರಾಂಶ
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದಲ್ಲಿ ನಡುಕ ಸೃಷ್ಟಿಸಿದ್ದ ಭಾರತದ ಹೆಮ್ಮೆಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ಬ್ರಹ್ಮೋಸ್ ಕ್ಷಿಪಣಿಯು ಈಗ ಶಬ್ದದ 3 ಪಟ್ಟು ವೇಗದಲ್ಲಿ ಸಂಚರಿಸುತ್ತದೆ ಮತ್ತು 400 ಕಿ.ಮೀ. ದೂರದ ಗುರಿಯನ್ನೂ ಭೇದಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 800 ಕಿ.ಮೀ.ಗೆ ಏರಿಸುವ ಗುರಿ ಭಾರತಕ್ಕಿದೆ.
ರಷ್ಯಾದ ಜತೆಗೆ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ಭಾರತದಲ್ಲೇ ಉತ್ಪಾದನೆಯಾಗುತ್ತಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತವು ವಾಯುಪಡೆಯ ತಮಿಳುನಾಡು ಸ್ಕ್ವಾಡ್ರನ್ ಎಸ್-30ಎಂಕೆಐ ವಿಮಾನ ಮೂಲಕ ಈ ಕ್ಷಿಪಣಿ ಹಾರಿಸಿ ಪಾಕ್ ವಾಯುನೆಲೆಗಳನ್ನು ಸಂಪೂರ್ಣ ಪುಡಿಗಟ್ಟಿತ್ತು.
ಅಭಿವೃದ್ಧಿಗೆ ಹಲವು ಕ್ರಮ:
ದೇಶದ ಹೆಮ್ಮೆಯ ಈ ಬ್ರಹ್ಮೋಸ್ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಖ್ಯವಾಗಿ ಕ್ಷಿಪಣಿ ವ್ಯಾಪ್ತಿಯನ್ನು 800 ಕಿ.ಮೀ.ಗೆ ಹೆಚ್ಚಿಸುವ ಕಾರ್ಯ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ ಸಬ್‌ಮೆರಿನ್ ಮೂಲಕ ಹಾರಿಸಬಹುದಾದ ಬ್ರಹ್ಮೋಸ್ ಕ್ಷಿಪಣಿ ಮಾದರಿಯನ್ನು ಸದ್ಯದಲ್ಲೇ ಪರೀಕ್ಷೆಗೊಳಪಡಿಸಲು ತೀರ್ಮಾನಿಸಲಾಗಿದೆ.
ಇನ್ನು ರಫೇಲ್ ಮತ್ತು ಇತರೆ ಯುದ್ಧವಿಮಾನಗಳಿಗಾಗಿ ಕಿರುಗಾತ್ರದ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಬ್ರಹ್ಮೋಸ್ ಕ್ಷಿಪಣಿ ಸೂಪರ್‌ಸಾನಿಕ್ ರೂಪದಲ್ಲಿದ್ದು, ಅದನ್ನು ಹೈಪರ್‌ಸಾನಿಕ್ ಕ್ಷಿಪಣಿಯಾಗಿ ಮೇಲ್ದರ್ಜೆಗೇರಿಸುವ ಕೆಲಸವೂ ಆಗುತ್ತಿದೆ.
ಭಾರತವು ಈಗಾಗಲೇ ಫಿಲಿಪ್ಪೀನ್ಸ್‌ಗೆ ಈ ಕ್ಷಿಪಣಿ ಪೂರೈಸಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ವಿಯೆಟ್ನಾಂ ಸೇರಿ ಹಲವು ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳೂ ಈ ಕ್ಷಿಪಣಿ ಖರೀದಿಗೆ ಆಸಕ್ತಿ ತೋರುತ್ತಿವೆ.
;Resize=(128,128))
;Resize=(128,128))