ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಕೇರಳದ ಲೂಟಿಕೋರರಿಂದ ಪೈಸೆ ಪೈಸೆಯನ್ನೂ ವಸೂಲಿ ಮಾಡಲಾಗುವುದು. ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನಕ್ಕೆ ಕನ್ನಹಾಕಿದವರನ್ನು ಜೈಲಿಗಟ್ಟಲಾಗುವುದು. ಇದು ಮೋದಿ ಗ್ಯಾರಂಟಿ!
ಶಬರಿಮಲೆ ಚಿನ್ನ ಕಳ್ಳರು ಜೈಲಿಗೆ:ಇದು ಮೋದಿ ಗ್ಯಾರಂಟಿ: ಪ್ರಧಾನಿ
- ಎಲ್‌ಡಿಎಫ್, ಯುಡಿಎಫ್ ಭ್ರಷ್ಚಾಚಾರದಲ್ಲಿ ಮುಳುಗಿವೆ- ಕಾಂಗ್ರೆಸ್ ಮುಸ್ಲಿಂಲೀಗ್‌ಗಿಂತಲೂ ಹೆಚ್ಚು ಕೋಮುವಾದಿ
- ಕೇರಳದಲ್ಲಿ ರಾಜಕೀಯ ಬದಲಾವಣೆ ಸನ್ನಿಹಿತವಾಗಿದೆಕೊಚ್ಚಿ: ಕೇರಳದಲ್ಲಿ ಬದಲಾವಣೆಯ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಈವರೆಗೆ ಅಧಿಕಾರ ನಡೆಸಿರುವ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭಾರೀ ಭ್ರಷ್ಟಾಚಾರ ನಡೆಸಿವೆ. ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಕೇರಳದ ಲೂಟಿಕೋರರಿಂದ ಪೈಸೆ ಪೈಸೆಯನ್ನೂ ವಸೂಲಿ ಮಾಡಲಾಗುವುದು. ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನಕ್ಕೆ ಕನ್ನಹಾಕಿದವರನ್ನು ಜೈಲಿಗಟ್ಟಲಾಗುವುದು. ಇದು ಮೋದಿ ಗ್ಯಾರಂಟಿ!ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದು ಹೀಗೆ.
ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ವಿರುದ್ಧ ತೀವ್ರ ಹರಿಹಾಯ್ದ ಅವರು, ಕೇರಳದ ಅಭಿವೃದ್ಧಿ ಎನ್‌ಡಿಎ ಮೈತ್ರಿಕೂಟದ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.ಕಾಂಗ್ರೆಸ್ ಮತ್ತು ಎಡಪಕ್ಷಗಳ ಒಕ್ಕೂಟಗಳ ಬಾವುಟ, ಚಿಹ್ನೆ ಬೇರೆ ಬೇರೆ ಇರಬಹುದು. ಆದರೆ ಅವುಗಳ ಅಜೆಂಡಾ ಮಾತ್ರ ಒಂದೇ. ಅವರು ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣದಲ್ಲಿ ಮುಳುಗಿದ್ದಾರೆ. ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಿಂದ ಎಡಪಕ್ಷಗಳು ನಿರ್ನಾಮವಾದರೂ ಕೇರಳದಲ್ಲಿ ಮಾತ್ರ ಎಲ್‌ಡಿಎಫ್-ಯುಡಿಎಫ್‌ನ ಹೊಂದಾಣಿಕೆ ರಾಜಕಾರಣದಿಂದ ಇನ್ನೂ ಅಸ್ವಿತ್ವ ಉಳಿಸಿಕೊಂಡಿವೆ. ಈ ಎರಡೂ ಪಕ್ಷಗಳ ಆಡಳಿತವನ್ನು ನೋಡಿರುವ ಜನರಿಗೆ ಮೂರನೇ ಆಯ್ಕೆಯಾದ ಎನ್‌ಡಿಎಯತ್ತ ತಿರುಗಿ ನೋಡಲು ಇದು ಸಕಾಲ. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಕೇರಳದ ನಿರ್ಮಾಣಕ್ಕಾಗಿ ಬಿಜೆಪಿಗೆ ಪೂರ್ಣಪ್ರಮಾಣದ ಬಹುಮತ ಬೇಕಿದೆ. ಕೇರಳದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ತರಲು ಇದು ಸರಿಯಾದ ಸಮಯ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ವಿರುದ್ಧ ಕಿಡಿ:ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ಅಜೆಂಡಾ ಇಲ್ಲ. ಅವರು ಮಾವೋವಾದಿಗಳಿಗಿಂತಲೂ ಹೆಚ್ಚು ಕಮ್ಯುನಿಸ್ಟರು ಹಾಗೂ ಮುಸ್ಲಿಂಲೀಗ್‌ಗಿಂತಲೂ ಹೆಚ್ಚು ಕೋಮುವಾದಿಗಳಾಗಿ ಬದಲಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅನ್ನು ದೇಶಾದ್ಯಂತ ‘ಎಂಎಎಂಸಿ’(ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್) ಎಂದು ಕರೆಯಲಾಗುತ್ತದೆ. ಇಂಥ ಕಾಂಗ್ರೆಸ್ಸಿಗರ ಬಗ್ಗೆ ಎಚ್ಚರಿರದಿಂದಿರುವುದು ಒಳಿತು. ಅವರು ಕೇರಳವನ್ನು ಪ್ರಯೋಗ ಶಾಲೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಮೂಲಭೂತವಾದಿ ಶಕ್ತಿಗಳಿಗೆ ನೇರವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಶಬರಿಮನೆ ಚಿನ್ನಕಳವು ಪ್ರಸ್ತಾಪ:ಇದೇ ವೇಳೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಕಳ್ಳತನ ಪ್ರಕರಣವನ್ನೂ ಪ್ರಸ್ತಾಪಿಸಿದ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಮಾತ್ರ ದೇವಸ್ಥಾನಗಳು ಮತ್ತು ನಂಬಿಕೆಗಳಿಗೆ ರಕ್ಷಣೆ ನೀಡಲು ಸಾಧ್ಯ. ಬಿಜೆಪಿಯು ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲ ಜೈಲಿಗಟ್ಟಲಾಗುವುದು. ಇದು ಮೋದಿಯ ಗ್ಯಾರಂಟಿ ಎಂದರು.
==ತಿರುವನಂತರ ಪಾಲಿಕೆ ಜಯ
ಗುಜರಾತ್‌ಗೆ ಹೋಲಿಕೆತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಯಶಸ್ವಿಯಾಗಿದ್ದನ್ನು ಗುಜರಾತ್‌ನಲ್ಲಿ ಬಿಜೆಪಿಗೆ ಸಿಕ್ಕ ಮೊದಲ ಗೆಲುವಿಗೆ ಹೋಲಿಕೆ ಮಾಡಿದ ಮೋದಿ, ತಿರುವನಂತಪುರದ ರೀತಿಯಲ್ಲೇ 1987ರಲ್ಲಿ ಮೊದಲ ಬಾರಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಪಕ್ಷ ಗೆಲುವು ಸಾಧಿಸಿತ್ತು. ಆ ಬಳಿಕ ಇಡೀ ರಾಜ್ಯದ ಅಧಿಕಾರ ಜನ ನಮ್ಮ ಕೈಗೆ ನೀಡಿದರು. ಗುಜರಾತ್‌ನಲ್ಲೂ ನಮ್ಮ ಪ್ರಯಾಣ ಒಂದು ನಗರದಿಂದಲೇ ಶುರುವಾಗಿದ್ದು, ಅದೇ ರೀತಿ ಕೇರಳದಲ್ಲೂ ನಮ್ಮ ಪ್ರಯಾಣ ಒಂದು ನಗರದಿಂದ ಆರಂಭವಾಗಿದೆ. ತಿರುವನಂತಪುರ ಇಡೀ ದೇಶಕ್ಕೆ ಮಾದರಿ ನಗರವಾಗಿ ಪರಿವರ್ತನೆ ಮಾಡಲಾಗುವುದು. ಇದಕ್ಕಾಗಿ ನಾನು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.