ಸಾರಾಂಶ
ಯಾರದ್ದೋ ಭಾವನೆಗೆ ಧಕ್ಕೆ ಆಯಿತು ಎನ್ನುವ ಕಾರಣ ಚಲನಚಿತ್ರ ನಿಲ್ಲಿಸಲಾಗದು ಎಂದು ಕಟುನುಡಿಗಳಲ್ಲಿ ಹೇಳಿರುವ ಸುಪ್ರೀಂಕೋರ್ಟ್, ಕಮಲ್ ಅಭಿನಯದ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಅಡ್ಡಿ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಸೂಚಿಸಿದೆ.
ನವದೆಹಲಿ: ಯಾರದ್ದೋ ಭಾವನೆಗೆ ಧಕ್ಕೆ ಆಯಿತು ಎನ್ನುವ ಕಾರಣ ಚಲನಚಿತ್ರ, ಸ್ಟ್ಯಾಂಡಪ್ ಕಾಮಿಡಿ (ಹಾಸ್ಯ ಕಾರ್ಯಕ್ರಮ), ಕವನ ವಾಚನ ಕಾರ್ಯಕ್ರಮ ನಿಲ್ಲಿಸಲಾಗದು ಎಂದು ಕಟುನುಡಿಗಳಲ್ಲಿ ಹೇಳಿರುವ ಸುಪ್ರೀಂಕೋರ್ಟ್, ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಯಾರಾದರೂ ಅಡ್ಡಿ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ಜೊತೆಗೆ ಕನ್ನಡ ವಿರೋಧಿ ಹೇಳಿಕೆ ಸಂಬಂಧ ಕಮಲ್‌ಹಾಸನ್ ಕ್ಷಮೆಯಾಚಿಸಬೇಕು ಎಂಬ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸೂಚನೆಗೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಕಟು ನುಡಿ:
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ವಿರೋಧಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ‘ಭಾವನೆಗಳಿಗೆ ನೋವುಂಟು ಮಾಡುವ ಪ್ರಕರಣಗಳಿಗೆ ಭಾರತದಲ್ಲಿ ಅಂತ್ಯವಿಲ್ಲ. ಒಂದು ವೇಳೆ ವಿದೂಷಕರು ಏನಾದರೂ ಹೇಳಿಕೆ ನೀಡಿದರೆ, ಅದರಿಂದ ಯಾರದ್ದಾದರೂ ಭಾವನೆಗೆ ಧಕ್ಕೆಯಾದರೆ ಅವರ ವಿರುದ್ಧ ಹಿಂಸಾತ್ಮಕ ಘಟನೆಗಳು ಮತ್ತು ಪ್ರತಿಭಟನೆ ನಡೆಯುತ್ತವೆ. ಇದು ನಾವು ಎತ್ತ ಸಾಗುತ್ತಿದ್ದೇವೆ ಎನ್ನುವ ಪ್ರಶ್ನೆ ಹುಟ್ಟಿಸುತ್ತದೆ. ಪ್ರತಿಭಟನೆಯ ಕಾರಣಕ್ಕೆ ಸಿನಿಮಾ, ಹಾಸ್ಯ ಕಾರ್ಯಕ್ರಮ, ಕವಿತೆಗಳನ್ನು ನಿಲ್ಲಿಸಬೇಕೇ? ಒಬ್ಬರ ಅಭಿಪ್ರಾಯದ ಕಾರಣಕ್ಕೆ ಈ ರೀತಿ ಆಗುವುದಕ್ಕೆ ನಾವು ಅವಕಾಶ ನೀಡಬಾರದು’ ಎಂದು ನ್ಯಾಯಾಲಯ ಹೇಳಿತು.
ಜತೆಗೆ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಕ್ಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ, ‘ರಾಜ್ಯ ಸರ್ಕಾರ ಚಲನಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದರ ಬಗ್ಗೆ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸುವುದು ಸೂಕ್ತ. ಯಾವುದೇ ವ್ಯಕ್ತಿ ಅಥವಾ ಗುಂಪು ಚಲನಚಿತ್ರ ಬಿಡುಗಡೆಯನ್ನು ತಡೆದರೆ, ಸ್ಥಗಿತಕ್ಕೆ ಬಲವಂತ ಮಾಡಿದರೆ, ಹಿಂಸಾಚಾರವನ್ನು ನಡೆಸಿದರೆ ಕ್ರಿಮಿನಲ್ ಮತ್ತು ನಾಗರಿಕ ಕಾನೂನಿನಡಿಯಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಆಕ್ಷೇಪ:
ಇನ್ನು ಕಮಲ್ ಕ್ಷಮೆ ಯಾಚಿಸಿದರೆ ಮಾತ್ರ ಸಿನಿಮಾ ಬಿಡುಗಡೆಗೆ ಅವಕಾಶ ನೀಡುತ್ತೇವೆ, ಚಿತ್ರ ಬಿಡುಗಡೆ ಮಾಡದಂತೆ ಸಂಘಟನೆಗಳ ಆಗ್ರಹವಿದೆ ಎನ್ನುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅರ್ಜಿಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ, ‘ನೀವು ಗುಂಪಿನ ಒತ್ತಡಕ್ಕೆ ಬಲಿಯಾಗಿದ್ದೀರಿ. ನೀವು ಪೊಲೀಸರಿಗೆ ಹೋಗಿ ಯಾವುದೇ ದೂರು ನೀಡಿಲ್ಲ. ಅದರ ಅರ್ಥ ಅವರ ವಿರುದ್ಧ ನಿಮಗೆ ಯಾವುದೇ ದೂರಿಲ್ಲ. ಹಿಂದೆ ಅಡಗಿ ಕುಳಿತಿದ್ದೀರಿ’ ಎಂದು ಆಕ್ಷೇಪಿಸಿದೆ.
ಮುಂದುವರೆದಂತೆ ಸುಪ್ರೀಂ ‘ಕ್ಷಮೆಯಾಚಿಸುವ ಪ್ರಶ್ನೆ ಎಲ್ಲಿದೆ? ನೀವು ಕಾನೂನನ್ನು ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹೇಳಿಕೆಗಳಿಂದ ನೋವಾಗಿದ್ದರೆ ಕಾನೂನು ಮಾನನಷ್ಟ ಮೊಕದ್ದಮೆ ಹೂಡಿ’ ಎಂದು ಸೂಚಿಸಿದೆ.
;Resize=(690,390))
)

;Resize=(128,128))
;Resize=(128,128))
;Resize=(128,128))
;Resize=(128,128))