ಸಾರಾಂಶ
ದೆಹಲಿ ಆಸ್ಪತ್ರೆ ಮತ್ತು ತಿಹಾರ್ ಜೈಲಿಗೂ ಬಾಂಬ್ ಸ್ಫೋಟ ಬೆದರಿಕೆ ಸಂದೇಶ ಬಂದ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಇತರ ಭದ್ರತಾ ಸಂಸ್ಥೆಗಳು ಬಂದು ಪರಿಶೀಲನೆ ನಡೆಸಿವೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ತಿಹಾರ್ ಜೈಲಿಗೂ ಕಿಡಿಗೇಡಿಗಳು ಇಮೇಲ್ ಮೂಲದ ಬಾಂಬ್ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ. ಮಾತ್ರವಲ್ಲದೇ ಮಂಗಳವಾರ ಮತ್ತೆ ದೆಹಲಿಯ ಏಳು ಆಸ್ಪತ್ರೆಗಳಿಗೆ ಇ ಮೇಲ್ ಮೂಲಕ ಬಾಂಬ್ ಸ್ಫೋಟಿಸುವ ಬೆದರಿಕೆ ಸಂದೇಶ ಬಂದಿದೆ.
ಎರಡು ದಿನಗಳ ಹಿಂದಷ್ಟೇ ದೆಹಲಿಯ 20 ಆಸ್ಪತ್ರೆಗಳು, ವಿಮಾನ ನಿಲ್ದಾಣ ಹಾಗೂ ಉತ್ತರ ರೈಲ್ವೆಯ ಸಿಪಿಆರ್‌ಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ, ಮಂಗಳವಾರ ಮತ್ತೆ ಬಾಂಬ್ ಸ್ಫೋಟದ ಬೆದರಿಕೆ ಬಂದಿದೆ. ಯುರೋಪ್ ಮೂಲದ ಬೀಬಲ್.ಕಾಂ ಯುರೋಪ್ ಮೂಲದ ಇಮೇಲ್ ನಿಂದ ಬೆದರಿಕೆ ಈ ಸಂದೇಶ ಬಂದಿದ್ದು, courtisgod123@beeble.com ನಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ.ವಿಚಾರ ತಿಳಿಯುತ್ತಿದ್ದಂತೆ ಬಾಂಬ್ ನಿಷ್ಟ್ರೀಯ ದಳ, ಬಾಂಬ್ ಪತ್ತೆ ದಳ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಶೋಧ ನಡೆಸಿದ್ದಾರೆ. ಇದು ಒಂದು ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ 4ನೇ ಬಾಂಬ್ ಬೆದರಿಕೆ ಘಟನೆಯಾಗಿದೆ.