ಸಾರಾಂಶ
ಕೋಲ್ಕತಾ: ವೈದ್ಯೆ ಮೇಲಿನ ರೇಪ್ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬಂಗಾಳದ ವೈದ್ಯರಿಗೆ ಎಚ್ಚರಿಕೆ ನೀಡಿರುವ ಟಿಎಂಸಿ ಸಂಸದ ಅರೂಪ್ ಚಕ್ರವರ್ತಿ,‘ಪ್ರತಿಭಟನೆ ಹೆಸರಲ್ಲಿ ನೀವು ಮನೆಗಾದರೂ ಹೋಗಿ ಅಥವಾ ನಿಮ್ಮ ಬಾಯ್‌ಫ್ರೆಂಡ್ ಜೊತೆಗಾದರೂ ಹೋಗಿ, ಆದರೆ ಒಂದು ವೇಳೆ ರೋಗಿಗಳು ಸತ್ತರೆ, ನಾವು ನಿಮ್ಮನ್ನು ಉಳಿಸುವುದಿಲ್ಲ’ ಎಂದು ನೇರವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಹಲವು ಮಹಿಳಾ ವೈದ್ಯರು, ತಮ್ಮ ಬಾಯ್‌ಫ್ರೆಂಡ್‌ಗಳನ್ನು ಭೇಟಿ ಮಾಡಲೆಂದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕೀಳು ಹೇಳಿಕೆಯನ್ನೂ ಚಕ್ರವರ್ತಿ ನೀಡಿದ್ದಾರೆ.
ಇಂದಿರಾ ರೀತಿ ಮಮತಾ ಹತ್ಯೆ ಮಾಡಿ ಎಂದು ಕರೆ ಕೊಟ್ಟ ವಿದ್ಯಾರ್ಥಿನಿ ಸೆರೆ
ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಇತರೆ ಟಿಎಂಸಿ ನಾಯಕರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ರೀತಿ ಹತ್ಯೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿನಿ, ಇತ್ತೀಚಿನ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಿಂದ ಆಕ್ರೋಶಗೊಂಡು ಈ ರೀತಿ ನಡೆದುಕೊಂಡಿದ್ದಾಳೆ ಎನ್ನಲಾಗಿದೆ. ಜೊತೆಗೆ ಹತ್ಯೆಗೀಡಾದ ವೈದ್ಯೆ ಹೆಸರು ಮತ್ತು ಫೋಟೋ ಬಹಿರಂಗಪಡಿಸಿದ ವಿಷಯದಲ್ಲೂ ಪೊಲೀಸರು ಆಕೆ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಈ ನಡುವೆ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡಿ ಸಂತ್ರಸ್ತೆಯ ಗುರುತು ಬಹಿರಂಗ ಪಡಿಸಿದ ಆರೋಪದ ಮೇಲೆ 1,000 ಜನರಿಗೆ ನೋಟಿಸ್ ನೀಡಲಾಗಿದೆ.