ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕಂಪನಿಗಳಿಗೂ ಮುಕ್ತ : ಲಾರಿ ಮೇಲೆ ರಾಕೆಟ್‌ ಉಡಾವಣೆ ಮಾಡಿ ಖಾಸಗಿ ಕಂಪನಿ ಇತಿಹಾಸ

| Published : Aug 25 2024, 01:52 AM IST / Updated: Aug 25 2024, 04:59 AM IST

ಸಾರಾಂಶ

ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ಮುಕ್ತಗೊಳಿಸಿದ ಬಳಿಕ ಚೆನ್ನೈ ಮೂಲದ ಅಂತರಿಕ್ಷ ಸ್ಟಾರ್ಟಪ್‌ ಕಂಪನಿಯೊಂದು ಹೊಸ ಇತಿಹಾಸ ನಿರ್ಮಿಸಿದೆ.

 ಚೆನ್ನೈ :  ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ಮುಕ್ತಗೊಳಿಸಿದ ಬಳಿಕ ಚೆನ್ನೈ ಮೂಲದ ಅಂತರಿಕ್ಷ ಸ್ಟಾರ್ಟಪ್‌ ಕಂಪನಿಯೊಂದು ಹೊಸ ಇತಿಹಾಸ ನಿರ್ಮಿಸಿದೆ. ಲಾರಿಯ ಮೇಲಿಟ್ಟು ದೇಶದ ಮೊದಲ ಮರುಬಳಕೆಯ ಹೈಬ್ರಿಡ್‌ ರಾಕೆಟ್‌ವೊಂದನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ರಾಕೆಟ್‌ 53 ಉಪಗ್ರಹಗಳನ್ನು ಹೊತ್ತೊಯ್ದಿದೆ. ಇವು ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸಲಿವೆ.

ಚೆನ್ನೈನ ರಮಣೀಯ ಈಸ್ಟ್ ಕೋಸ್ಟ್‌ ರಸ್ತೆ ಬಳಿಯ ಮೈದಾನವೊಂದರಲ್ಲಿ ಲಾರಿಯ ಮೇಲೆ ಇಟ್ಟು ‘ರೂಮಿ-2024’ ರಾಕೆಟ್‌ ಅನ್ನು ಉಡಾವಣೆ ಮಾಡಲಾಗಿದೆ. 3.5 ಮೀಟರ್‌ ಎತ್ತರದ ಈ ರಾಕೆಟ್‌ ಬೆಳಗ್ಗೆ 7ಕ್ಕೆ ಉಡಾವಣೆಯಾಗಬೇಕಿತ್ತು. ಆದರೆ 7.25ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಆ ರಾಕೆಟ್‌ ಅಭಿವೃದ್ಧಿಪಡಿಸಿ ಉಡಾವಣೆ ಮಾಡಿರುವ ಸ್ಟಾರ್ಟಪ್‌ ಕಂಪನಿ ಸ್ಪೇಸ್‌ ಜೋನ್‌ ಇಂಡಿಯಾದ ಸಂಸ್ಥಾಪಕ ಹಾಗೂ ಸಿಇಒ ಆನಂದ್‌ ಮೇಘಲಿಂಗಂ ಅವರು ತಿಳಿಸಿದ್ದಾರೆ.

ಲಾರಿಯ ಮೇಲಿಟ್ಟು ಹೈಬ್ರಿಡ್‌ ರಾಕೆಟ್‌ವೊಂದನ್ನು ಉಡಾವಣೆ ಮಾಡಿದ ವಿಶ್ವದ ಮೊದಲ ಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಪುತ್ರ ‘ರೂಮಿತ್ರನ್‌’ ಎಂಬ ಹೆಸರು ಹೊಂದಿರುವ ಹಿನ್ನೆಲೆಯಲ್ಲಿ ರಾಕೆಟ್‌ಗೆ ‘ರೂಮಿ’ ಎಂಬ ಹೆಸರು ನಾಮಕರಣ ಮಾಡಲಾಗಿದೆ ಎಂದಿದ್ದಾರೆ.

ಮರುಬಳಕೆಯ ಹೈಬ್ರಿಡ್‌ ರಾಕೆಟ್‌ಗಳಿಂದಾಗಿ ಬಾಹ್ಯಾಕಾಶ ಸಂಶೋಧನೆಗೆ ಆಗುವ ದುಬಾರಿ ವೆಚ್ಚ ತಗ್ಗಲಿದೆ. ಉಡಾವಣೆಗಳಿಂದ ಹವಾಮಾನದ ಮೇಲೆ ಆಗುವ ಪರಿಣಾಮವೂ ಇಳಿಮುಖವಾಗಲಿದೆ ಎಂದು ತಿಳಿಸಿದ್ದಾರೆ.

‘ಮೂನ್‌ ಮ್ಯಾನ್‌ ಆಫ್‌ ಇಂಡಿಯಾ’ ಎಂದೇ ಹೆಸರುವಾಸಿಯಾಗಿರುವ ‘ಚಂದ್ರಯಾನ’ ಯೋಜನಾ ನಿರ್ದೇಶಕ ಮೈಲಸ್ವಾಮಿ ಅಣ್ಣಾದುರೈ ಅವರು ಸ್ಪೇಸ್‌ ಜೋನ್‌ ಇಂಡಿಯಾ ಕಂಪನಿಯ ಮಾರ್ಗದರ್ಶಕರಾಗಿದ್ದಾರೆ.

80 ಕೆ.ಜಿ. ತೂಕ ಹೊಂದಿರುವ ಈ ರಾಕೆಟ್‌ನ ಶೇ.70ರಷ್ಟು ಭಾಗವನ್ನು ಮರುಬಳಕೆ ಮಾಡಬಹುದಾಗಿದೆ.