ಸಾರಾಂಶ
ನವದೆಹಲಿ : ಪಹಲ್ಗಾಂ ದಾಳಿ ಹಿನ್ನೆಲೆಯಲ್ಲಿ ತೆಗೆದುಕೊಂಡ ರಾಜತಾಂತ್ರಿಕ ಕ್ರಮದ ಭಾಗವಾಗಿ, ಭಾರತದಲ್ಲಿ ನೆಲೆಸಿರುವ ಎಲ್ಲಾ ಪಾಕಿಸ್ತಾನ ಪ್ರಜೆಗಳಿಗೆ ತಾಯ್ನಾಡಿಗೆ ಮರಳಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಏ.27ರಂದು ಸಂಜೆಗೆ ಮುಗಿಯಲಿದೆ. ಒಂದು ವೇಳೆ ಭಾನುವಾರ ಸಂಜೆಯೊಳಗೆ ಭಾರತ ತೊರೆಯದ ಪಾಕ್ ಪ್ರಜೆಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ನಿಮ್ಮ ನಿಮ್ಮ ರಾಜ್ಯಗಳಲ್ಲಿ ಇರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಅವರು ಏ.27ರ ಗಡುವಿನೊಳಗೆ ದೇಶ ಬಿಡುವುದನ್ನು ಖಚಿತಪಡಿಸಿಕೊಳ್ಳಿ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಸೂಚಿಸಿದ್ದಾರೆ.
ಇದರ ಭಾಗವಾಗಿ ಕಳೆದ ಮೂರು ದಿನಗಳಲ್ಲಿ ಕೇವಲ 450 ಪಾಕಿಸ್ತಾನ ಪ್ರಜೆಗಳು ಮಾತ್ರವೇ ವಾಘಾ-ಅಟ್ಟಾರಿ ಗಡಿ ಮೂಲ ತಾಯ್ನಾಡಿಗೆ ತೆರಳಿದ್ದಾರೆ. ಆದರೆ ರಾಜಸ್ಥಾನದಲ್ಲಿ 20000, ಮಹಾರಾಷ್ಟ್ರದಲ್ಲಿ 5000 ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹೀಗೆ ವೀಸಾ ರದ್ದಾಗಲಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿದೆ. ಅವರೆಲ್ಲಾ ಭಾನುವಾರ ಒಂದೇ ದಿನ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆ ತೀರಾ ಕಡಿಮೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಸೋಮವಾರದ ಬಳಿಕ ಇವರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಇದೆ.
ಮರಳಿ ನರಕಕ್ಕೆ ಕಳಿಸಬೇಡಿ: ಹಿಂದೂ ನಿರಾಶ್ರಿತರ ಅಳಲು
ಜೈಸಲ್ಮೇರ್: ಪಹಲ್ಗಾಂ ದಾಳಿಯ ಬಳಿಕ ಭಾರತದಲ್ಲಿನ ಪಾಕಿಸ್ತಾನ ಪ್ರಜೆಗಳು ಭಾರತ ಬಿಟ್ಟು ತೆರಳಲು ಗಡುವು ಮುಕ್ತಾಯವಾಗುತ್ತಿದ್ದಂತೆ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಆತಂಕಕ್ಕೆ ಒಳಗಾಗಿದ್ದು, ‘ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಪರಿಸ್ಥಿತಿ ಹದೆಗೆಡುತ್ತಿದ್ದು, ಪಾಕ್‌ನಂತಹ ನರಕಕ್ಕೆ ನಮ್ಮನ್ನು ಕಳುಹಿಸಬೇಡಿ’ ಎಂದು ಅಳಲು ತೋಡಿಕೊಂಡಿದ್ದಾರೆ.
ಪಾಕ್‌ನಲ್ಲಿನ ಧಾರ್ಮಿಕ ಕಿರುಕುಳದಿಂದ ಪಲಾಯನಗೈದು ಬಂದಿದ್ದ ಹಿಂದೂ ನಿರಾಶ್ರಿತರು ಭಾರತ ಸರ್ಕಾರದ ನಿರ್ಧಾರದಿಂದ ಮತ್ತೆ ಚಿಂತೆಗೀಡಾಗಿದ್ದಾರೆ. ಮಾಧ್ಯಮಗಳಲ್ಲಿ ಅವರು ತಮ್ಮ ಆತಂಕ ತೋಡಿಕೊಂಡಿದ್ದು, ‘ಪಾಕಿಸ್ತಾನದಂತಹ ನರಕಕ್ಕೆ ಮರಳುವ ಆಲೋಚನೆ ಚಿಂತೆಗೀಡು ಮಾಡಿದೆ. ಅಂತಹ ನರಕಕ್ಕೆ ಹೋಗುವುದರ ಬದಲು ಬಾರತದಲ್ಲಿ ಸಾಯುವುದೇ ಸ್ವೀಕಾರಾರ್ಹ. ನಮ್ಮಲ್ಲಿದ್ದ ಎಲ್ಲವನ್ನು ಬಿಟ್ಟು ಬಂದಿದ್ದೇವೆ. ದಯವಿಟ್ಟು ಪಾಕ್‌ಗೆ ವಾಪಸ್ ಕಳುಹಿಸಬೇಡಿ’ ಎಂದು ಮನವಿ ಮಾಡಿದ್ದಾರೆ. ರಾಜಸ್ಥಾನವೊಂದರಲ್ಲೇ ಇಂಥ 20000ಕ್ಕೂ ಹೆಚ್ಚು ಹಿಂದೂ ನಿರಾಶ್ರಿತರು ಇದ್ದಾರೆ. ಹಿಂದೂ ನಿರಾಶ್ರಿತರ ಪೌರತ್ವ ಅರ್ಜಿಗಳು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಇವರೆಲ್ಲಾ ಸಂಕಷ್ಟದಲ್ಲಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥನ ಪದಚ್ಯತಿಗೆ ಪಾಕಿಗಳ ಆಗ್ರಹ!
ಇಸ್ಲಾಮಾಬಾದ್: ಪಹಲ್ಗಾಂ ನರಮೇಧಕ್ಕೆ ನೇರ ಕಾರಣ ಎಂದು ಹೇಳಲಾದ ಪಾಕ್ ಸೇನಾ ಮುಖ್ಯಸ್ಥ ಜ.ಆಸಿಂ ಮುನೀರ್ ಪದಚ್ಯುತಿಗೆ ಇದೀಗ ಪಾಕಿಸ್ತಾನಿ ನಾಗರಿಕರು ಮತ್ತು ಪಾಕ್‌ನ ನಿವೃತ್ತ ಸೇನಾಧಿಕಾರಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ರಿಸೈನ್ ಆಸಿಂ ಮುನೀರ್, ಪಾಕಿಸ್ತಾನ್ ಅಂಡರ್ ಮಿಲಿಟರಿ ಫ್ಯಾಸಿಸಂ, ಬಾಯ್ಕಾಟ್ ಫೌಜಿ ದಂಡಾ ಹೆಸರಿನ ಹ್ಯಾಷ್‌ಟ್ಯಾಗ್‌ಗಳು ಟ್ವೀಟರ್‌ನಲ್ಲಿ ಟ್ರೆಂಡ್ ಆಗಿದೆ.
ನಿವೃತ್ತ ಸೇನಾಧಿಕಾರಿ ಆದಿಲ್ ರಾಜಾ, ಸ್ವತಃ ಅಮೀರ್ ಐಎಸ್‌ಐ ಮೂಲಕ ಪಹಲ್ಗಾಂ ಹತ್ಯಾಕಾಂಡ ನಡೆಸಿದ್ದಾರೆ. ಅವರನ್ನು ತಕ್ಷಣವೇ ಪದಚ್ಯುತಿಗೊಳಿಸಿ ಎಂದು ಆಗ್ರಹಿಸಿದ್ದಾರೆ. ಸುಫಿಸಾಲ್ ಎಂಬ ಇನ್ನೊಂದು ಖಾತೆಯಲ್ಲಿ ಇಮ್ರಾನ್, ಮುನೀರ್ ತೆಗೆದುಹಾಕಿ ಪಾಕಿಸ್ತಾನ ಉಳಿಸಿ ಎಂದು ಒತ್ತಾಯ ಮಾಡಿದ್ದಾರೆ. ಮುನೀರ್ ನಮ್ಮ ದೇಶಕ್ಕೆ ಆಪಾಯಕಾರಿಯಾದ ಕಾರಣ ಮೊದಲು ಆತನನ್ನು ಕಿತ್ತುಹಾಕಿ ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ.

;Resize=(128,128))
;Resize=(128,128))
;Resize=(128,128))