ನಟ ಸುಶಾಂತ್‌ ಸಿಂಗ್‌ ನಿಗೂಢ ಸಾವಿನ ಪ್ರಕರಣ- ರಿಯಾಗೆ ಲುಕ್‌ಔಟ್‌ ನೋಟಿಸ್‌: ಸಿಬಿಐಗೆ ಸುಪ್ರಿಂ ಚಾಟಿ

| Published : Oct 26 2024, 12:57 AM IST / Updated: Oct 26 2024, 06:10 AM IST

ನಟ ಸುಶಾಂತ್‌ ಸಿಂಗ್‌ ನಿಗೂಢ ಸಾವಿನ ಪ್ರಕರಣ- ರಿಯಾಗೆ ಲುಕ್‌ಔಟ್‌ ನೋಟಿಸ್‌: ಸಿಬಿಐಗೆ ಸುಪ್ರಿಂ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಸುಶಾಂತ್‌ ಅವರ ಪ್ರೇಯಸಿ ಆಗಿದ್ದ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ವಿರುದ್ಧ ಲುಕ್‌ಔಟ್ ನೋಟಿಸ್‌ ನೋಟಿಸ್‌ ಹೊರಡಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ಗರಂ ಆಗಿದೆ.

ನವದೆಹಲಿ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಸುಶಾಂತ್‌ ಅವರ ಪ್ರೇಯಸಿ ಆಗಿದ್ದ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ವಿರುದ್ಧ ಲುಕ್‌ಔಟ್ ನೋಟಿಸ್‌ ನೋಟಿಸ್‌ ಹೊರಡಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ಗರಂ ಆಗಿದೆ. ನೋಟಿಸ್‌ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ ತೀರ್ಪನ್ನು ಶುಕ್ರವಾರ ಅದು ಎತ್ತಿಹಿಡಿದಿದೆ.

ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಇದು ನಿಷ್ಪ್ರಯೋಜಕ ಅರ್ಜಿ. ಆರೋಪಿ (ರಿಯಾ) ಉನ್ನತ ಸ್ಥಾನದಲ್ಲಿರುವವರು ಎಂಬ ಕಾರಣಕ್ಕೆ ನೀವು ಈ ಅರ್ಜಿಯನ್ನು ಸಲ್ಲಿಸಿದ್ದೀರಿ’ ಎಂದು ಹೇಳಿ ಸಿಬಿಐ ಅರ್ಜಿ ವಜಾ ಮಾಡಿದೆ.

ಸುಶಾಂತ್‌ ಅವರ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ನೀಡಿದ್ದ ಲುಕ್‌ಔಟ್‌ ನೋಟಿಸ್‌ ಅನ್ನು ಪ್ರಶ್ನಿಸಿ ರಿಯಾ ಹೈಕೋರ್ಟ್‌ ಮೊರೆಹೋಗಿದ್ದರು. ಈ ವೇಳೆ ಹೈಕೋರ್ಟ್‌ ಈ ಲುಕ್‌ಔಟ್‌ ನೋಟಿಸ್‌ ಅನ್ನು ರದ್ದುಗೊಳಿಸಿತ್ತು. ನಂತರ ಸಿಬಿಐ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಅರ್ಧ ಸಂಬಳ ಮಾತ್ರ ಪಡೆಯಲು ಮುಯಿಜು ನಿರ್ಧಾರ

ಮಾಲೆ: ಭಾರತದ ಜತೆ ಸಂಘರ್ಷಕ್ಕೆ ಇಳಿದ ಬಳಿಕ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯ ಅಧ್ಯಕ್ಷ ಮಯಿಜು ತಮ್ಮ ವೇತನವನ್ನು ಶೇ.50ರಷ್ಟು ಕಡಿಮೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವ ಸಂಬಳವನ್ನು ಶೇ.10ರಷ್ಟು ಕಡಿತಗೊಳಿಸುವುದಕ್ಕೆ ಅವರ ಸರ್ಕಾರ ಮುಂದಾಗಿದೆ.ಮೂಲಗಳ ಪ್ರಕಾರ ಮುಯಿಜು ವಾರ್ಷಿಕ ಸಂಬಳವನ್ನು ಹಿಂದಿನ 65 ಲಕ್ಷ ರು. ನಿಂದ 32. ಲಕ್ಷ ರು.ಗೆ ಇಳಿಸಲಾಗಿದೆ. ಆದರೆ ಸಂಸದರು ಮತ್ತು ನ್ಯಾಯಾಧೀಶರು ಸಂಬಳ ಕಡಿತದಿಂದ ವಿನಾಯ್ತಿ ಪಡೆಯಲಿದ್ದಾರೆ. 2 ವಾರಗಳ ಹಿಂದಷ್ಟೇ ಮಯಿಜು ಖರ್ಚು ಕಡಿಮೆ ಮಾಡುವ ಕಾರಣಕ್ಕಾಗಿ ಮಂತ್ರಿಗಳೂ ಸೇರಿದಂತೆ 225ಕ್ಕೂ ಹೆಚ್ಚು ಜನರ ನೇಮಕಾತಿಯನ್ನು ರದ್ದುಗೊಳಿಸಿದ್ದರು.

ಈ ವರ್ಷ ₹664 ಕೋಟಿ ಸಂಬಳ ಪಡೆದ ಮೈಕ್ರೋಸಾಫ್ಟ್‌ ಸಿಇಒ ನಾದೆಳ್ಲ!

ವಾಷಿಂಗ್ಟನ್‌: ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಅಮೆರಿಕದ ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ನ ಭಾರತೀಯ ಮೂಲದ ಸಿಇಒ ಸತ್ಯ ನಾದೆಳ್ಲ ವೇತನ 2024ರಲ್ಲಿ ಬರೋಬ್ಬರಿ ಶೇ.63ರಷ್ಟು ಏರಿಕೆ ಕಂಡಿದೆ.

ಈ ವರ್ಷ ಅವರು 79 ಮಿಲಿಯನ್‌ ಡಾಲರ್‌ (ಸುಮಾರು 664 ಕೋಟಿ ರು.) ವೇತನ ಪ್ಯಾಕೇಜ್‌ ಪಡೆದುಕೊಂಡಿದ್ದಾರೆ. ಇದು ಕಳೆದ ವರ್ಷಕ್ಕಿಂತ ಶೇ.63ರಷ್ಟು ಹೆಚ್ಚಾಗಿದೆ. ಅವರ ವೇತನದ ಶೇ.90ರಷ್ಟು ಭಾಗವು ಮೈಕ್ರೋಸಾಫ್ಟ್‌ನ ಷೇರುಗಳ ರೂಪದಲ್ಲಿದೆ. 2014ರಲ್ಲಿ ಅವರು ಮೈಕ್ರೋಸಾಫ್ಟ್‌ನ ಸಿಇಒ ಆದ ವರ್ಷ ಸುಮಾರು 700 ಕೋಟಿ ರು. ಪ್ಯಾಕೇಜ್‌ ಪಡೆದುಕೊಂಡಿದ್ದರು. ಬಳಿಕ ಈ ವರ್ಷ ಅವರು ಪಡೆದಿರುವುದು ಅತಿಹೆಚ್ಚು ವೇತನದ ಪ್ಯಾಕೇಜ್‌ ಆಗಿದೆ.ಈ ವರ್ಷ ಮೈಕ್ರೋಸಾಫ್ಟ್‌ನ ಸಿಎಫ್‌ಒ ವೇತನ ಶೇ.30ರಷ್ಟು ಹಾಗೂ ಅಧ್ಯಕ್ಷರ ವೇತನ ಶೇ.29ರಷ್ಟು ಏರಿಕೆಯಾಗಿದೆ.

ಬಿಜೆಪಿಗರಿಂದ ಕೇಜ್ರಿವಾಲ್‌ ಮೇಲೆ ದಾಳಿ ಯತ್ನ: ಆಪ್ ಆರೋಪ

ನವದೆಹಲಿ: ಶುಕ್ರವಾರ ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಆಮ್ ಆದ್ಮಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಬಿಜೆಪಿಗರು ಆಪ್ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆಪ್ ಗಂಭೀರ ಆರೋಪ ಮಾಡಿದೆ.ಆಪ್‍ ನಾಯಕ, ಸಚಿವ ಸೌರಭ್‌ ಭಾರದ್ವಾಜ್‌ ಮಾತನಾಡಿ, ‘ಇದು ಬಿಜೆಪಿಯ ಹೇಡಿತನದ ಪ್ರಯತ್ನ. ಕೇಜ್ರಿವಾಲ್ ಅವರ ಜೀವಕ್ಕೆ ಯಾವುದೇ ಅಪಾಯ ಎದುರಾದರೆ ಅಥವಾ ಯಾರೇ ಹಾನಿ ಉಂಟು ಮಾಡಿದರೆ ಅದಕ್ಕೆ ಬಿಜೆಪಿಯವರೇ ಹೊಣೆ ಎಂದು ನಾವು ಸ್ಪಷ್ಟ ಪಡಿಸುತ್ತೇವೆ’ ಎಂದಿದ್ದಾರೆ.2025ರ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಆಪ್ ದೆಹಲಿಯ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ.

ಇನ್ನು ವರ್ಷಕ್ಕೆ 90 ಸಾವಿರ ಭಾರತೀಯರಿಗೆ ಜರ್ಮನಿ ವೀಸಾ

ನವದೆಹಲಿ: ನುರಿತ ಭಾರತೀಯ ನೌಕರರಿಗೆ ವಾರ್ಷಿಕವಾಗಿ ನೀಡುತ್ತಿದ್ದ ವೀಸಾ ಸಂಖ್ಯೆಯನ್ನು 20,000ದಿಂದ 90,000ಕ್ಕೆ ಹೆಚ್ಚಿಸಲು ಜರ್ಮನಿ ನಿರ್ಧರಿಸಿದೆ. ಇದು ಒಂದೇ ವರ್ಷದಲ್ಲಿ ಸುಮಾರು 3.5 ಪಟ್ಟು ಏರಿಕೆ ಆಗಿದೆ.

3 ದಿನಗಳ ಭಾರತ ಪ್ರವಾಸದಲ್ಲಿರುವ ಜಮರ್ನ್‌ ಚಾನ್ಸಲರ್‌ ಒಲಾಫ್‌ ಸ್ಚೋಲ್ಸ್‌ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದರು.ಇದೇ ವೇಳೆ ಸ್ಚೋಲ್ಸ್‌ ಮಾತನಾಡಿ, ‘ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಕಳೆದೊಂದು ವರ್ಷದಲ್ಲಿ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸಂಖ್ಯೆ 23,000ರಷ್ಟು ಏರಿದೆ’ ಎಂದರು ಹಾಗೂ ಡಿಜಿಟಲೀಕರಣದ ಮೂಲಕ ವೀಸಾ ಪ್ರಕ್ರಿಯೆಗೆ ವೇಗ ತುಂಬುವ ಭರವಸೆ ನೀಡಿದರು.

ಈ ವೇಳೆ ಜರ್ಮನಿ ಕೇವಲ ನುರಿತ ಕಾರ್ಮಿಕರನ್ನು ಸ್ವಾಗತಿಸುತ್ತದೆ ಎಂದ ಸ್ಚೋಲ್ಸ್‌, ಯಾರನ್ನು ತಮ್ಮ ದೇಶಕ್ಕೆ ಬರಮಾಡಿಕೊಳ್ಳಬೇಕು ಎಂದುದನ್ನು ನಾವೇ ನಿರ್ಧರಿಸುತ್ತೇವೆ ಎಂದಿದ್ದಾರೆ.

ಕೇರಳದಲ್ಲಿ 100 ಕೋಟಿಗೆ ಶಾಸಕರ ಕುದುರೆ ವ್ಯಾಪಾರ?

ತಿರುವನಂತಪುರ: ಕೇರಳದ ಕುಟ್ಟನಾಡ್‌ ಕ್ಷೇತ್ರದ ಎನ್‌ಸಿಪಿ (ಶರದ್‌ ಪವಾರ್‌ ಬಣ) ಶಾಸಕ ಥಾಮಸ್‌, ಆಡಳಿತಾರೂಢ ಎಡಪಕ್ಷದ ಇಬ್ಬರು ಶಾಸಕರಿಗೆ ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಬಣ ಸೇರಲು ತಲಾ 50 ಕೋಟಿ ರು. ಆಫರ್‌ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪವನ್ನು ಥಾಮಸ್‌ ತಿರಸ್ಕರಿಸಿದ್ದರೆ, ಆಫರ್‌ ಬಂದಿತ್ತು ಎನ್ನಲಾದ ಇಬ್ಬರು ಪೈಕಿ ಒಬ್ಬ ಶಾಸಕ ‘ಹೌದು’ ಎಂದಿದ್ದರೆ, ಮತ್ತೊಬ್ಬರು ಅಂಥ ಘಟನೆ ನಡೆದಿದ್ದು ನೆನೆಪಿಲ್ಲ ಎಂದಿದ್ದಾರೆ.

ಜನಾಧಿಪತ್ಯ ಕೇರಳ ಕಾಂಗ್ರೆಸ್‌ನ ಆ್ಯಂಟನಿ ರಾಜು ಮತ್ತು ಆರ್‌ಎಸ್‌ಪಿ ಕೊವೂರು ಕುಂಜುಮನ್‌ ಅವರಿಗೆ, ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಿರುವ ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಬಣ ಸೇರುವಂತೆ ಥಾಮಸ್‌ ತಲಾ 50 ಕೋಟಿ ರು. ಆಫರ್‌ ನೀಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.ಆದರೆ ಈ ಆರೋಪವನ್ನು ಥಾಮಸ್‌ ತಳ್ಳಿಹಾಕಿದ್ದಾರೆ. ‘ನಾನು ಸಂಪುಟ ಸೇರ್ಪಡೆಯಾಗಬೇಕಾದ ಹೊತ್ತಿನಲ್ಲೇ ಸುಳ್ಳು ಆರೋಪ ಹೊರಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ. ಆದರೆ ಇಂಥ ಕುದುರೆ ವ್ಯಾಪಾರದ ಆಫರ್‌ ಬಂದಿದ್ದು ಹೌದು ಎಂದು ಆ್ಯಂಟನಿ ರಾಜು ಹೇಳಿದ್ದರೆ, ಅಂಥ ಯಾವುದೇ ಘಟನೆ ನೆನಪಿಲ್ಲ ಎಂದು ಕುಂಜುಮನ್‌ ಹೇಳಿದ್ದಾರೆ.