ಸಾರಾಂಶ
ಕೇಂದ್ರ ಸರ್ಕಾರದ ರೈತ-ಕಾರ್ಮಿಕ ವಿರೋಧಿ ನೀತಿ ಹಾಗೂ ಕಾರ್ಪೋಟರೇಟ್ ಪರ ನೀತಿಯನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ಗೆ ದೇಶಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಕೇರಳದಲ್ಲಿ ಮಾತ್ರ ಯಶಸ್ವಿ, ಬಂಗಾಳದಲ್ಲಿ ಲಘು ಹಿಂಸಾಚಾರ
10 ಸಂಘಟನೆಗಳು ಕರೆಕೊಟ್ಟಿದ್ದ ಬಂದ್ ಪ್ರತಿಭಟನೆಗೆ ಸೀಮಿತ==
ನವದೆಹಲಿ: ಕೇಂದ್ರ ಸರ್ಕಾರದ ರೈತ-ಕಾರ್ಮಿಕ ವಿರೋಧಿ ನೀತಿ ಹಾಗೂ ಕಾರ್ಪೋಟರೇಟ್ ಪರ ನೀತಿಯನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ಗೆ ದೇಶಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೇರಳದಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದ್ದರೆ, ಪಶ್ಚಿಮ ಬಂಗಾಳದ ಕೆಲವೆಡೆ ಹಿಂಸಾಚಾರ ಘಟನೆ ನಡೆದಿವೆ. ಉಳಿದಂತೆ ಬಹುತೇಕ ಕಡೆ ಜನಜೀವನ ಸಹಜವಾಗಿಯೇ ನಡೆದಿದೆ. ಕೆಲವೆಡೆ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯವಾಗಿದೆ.ಕೇರಳದಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದ್ದು, ನಗರ, ಪಟ್ಟಣ, ಹಳ್ಳಿಗಳು ಸ್ತಬ್ಧವಾಗಿದ್ದವು. ಅಂಗಡಿಗಳು, ಕಚೇರಿಗಳು, ಶಾಲೆಗಳು ಮುಚ್ಚಿದ್ದು, ವಾಹನ ಓಡಾಟವಿಲ್ಲದೆ ರಸ್ತೆಗಳು ಖಾಲಿಯಿದ್ದವು. ಕೊಚ್ಚಿ ಮತ್ತು ಕೊಲ್ಲಂನಲ್ಲಿ ಬೆಳಿಗ್ಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳ ಸೇವೆಯನ್ನು ಪ್ರತಿಭಟನಾಕಾರರು ತಡೆದು, ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದರು.
ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಎಡಪಂಥೀಯ ಕಾರ್ಯಕರ್ತರು ಪೊಲೀಸರು ಮತ್ತು ಟಿಎಂಸಿ ಬೆಂಬಲಿಗರೊಂದಿಗೆ ಘರ್ಷಣೆ ನಡೆಸಿದ್ದಾರೆ. ಹೀಗಾಗಿ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯಾಪಾರ ವಹಿವಾಟು ಸಹಜವಾಗಿಯೇ ನಡೆದಿದೆ. 700 ಮಾರುಕಟ್ಟೆಗಳು, 56 ಕೈಗಾರಿಕಾ ಪ್ರದೇಶಗಳು ಎಂದಿನಂತೆ ಕಾರ್ಯನಿರ್ವಹಿಸಿವೆ.ಪುದುಚೇರಿ, ಅಸ್ಸಾಂ, ಬಿಹಾರ, ಜಾರ್ಖಂಡ, ತಮಿಳುನಾಡು, ಪಂಜಾಬ್, ಕೇರಳ, ಒಡಿಶಾ, ಕರ್ನಾಟಕ, ಗೋವಾ ಮೊದಲಾದೆಡೆ ಬಂದ್‌ನ ವಾತಾವರಣ ಕಂಡುಬಂತು. ಇನ್ನು ರಾಜಸ್ಥಾನ, ಹರ್ಯಾಣ, ತೆಲಂಗಾಣ, ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಬಂದ್‌ಗೆ ಅಲ್ಪ ಬೆಂಬಲ ವ್ಯಕ್ತವಾಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್‌ಗಳಲ್ಲಿ ಕೈಗಾರಿಕಾ ಮುಷ್ಕರಗಳು ನಡೆದವು ಎಂದು ಕಾರ್ಮಿಕ ಸಂಘಟನೆಗಳ ವೇದಿಕೆ ತಿಳಿಸಿದೆ.