ಸಾರಾಂಶ
ಪುಣೆ: ಯೋಗ್ಯತೆಗೂ ಮೀರಿದ ಸೌಲಭ್ಯಗಳಿಗಾಗಿ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಡೆಯನ್ನು ಅವರ ತಂದೆ ಮಾಜಿ ಐಎಎಸ್ ದಿಲೀಪ್ ಸಮರ್ಥಿಸಿಕೊಂಡಿದ್ದಾರೆ ಹಾಗೂ ನನ್ನ ಮಗಳ ವಿರುದ್ಧ ಪಿತೂರಿ ನಡೆದಿದೆ. ಈ ಬಗ್ಗೆ ಆಕೆ ಕೇಂದ್ರ ಸರ್ಕಾರ ರಚಿಸಿರುವ ವಿಚಾರಣಾ ತಂಡದ ಮುಂದೆ ಎಲ್ಲ ವಿವರ ಸಲ್ಲಿಸಲಿದ್ದಾಳೆ ಎಂದಿದ್ದಾರೆ.
ತರಬೇತಿ ಅವಧಿಯಲ್ಲಿರುವಾಗಲೇ ಪೂಜಾ ಪ್ರತ್ಯೇಕ ಕಚೇರಿ, ಕಾರು ಹಾಗೂ ಮನೆಗಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದಿಲೀಪ್, ‘ಕುಳಿತುಕೊಳ್ಳಲು ಜಾಗ ಕೇಳುವುದು ತಪ್ಪಲ್ಲ’ ಎಂದಿದ್ದಾರೆ.
ಇದೇ ವೇಳೆ ಪಿಸ್ತೂಲು ಹಿಡಿದು ರೈತರನ್ನು ಬೆದರಿಸಿದ ತಮ್ಮ ಪತ್ನಿಯ ನಡೆಯನ್ನು ಸಮರ್ಥಿಸಿಕೊಳ್ಳುತ್ತಾ, ‘ಕೆಲ ಪುರುಷರು ಆಕೆಯನ್ನು ಸುತ್ತುವರೆದು ಆಕ್ರಮಿಸಲು ಪ್ರಯತ್ನಿಸಿದ ಕಾರಣ ತನ್ನ ಆತ್ಮರಕ್ಷಣೆಗಾಗಿ ಆಯುಧವನ್ನು ಹೊರತೆಗೆದಿದ್ದಳು. ಆದರೆ ಗುಂಡು ಹಾರಿಸಿರಲಿಲ್ಲ’ ಎಂದಿದ್ದಾರೆ.
ಪಿಸ್ತೂಲಿಂದ ರೈತಗೆ ಬೆದರಿಕೆ: ಐಎಎಸ್ ಪೂಜಾ ತಾಯಿ ವಿರುದ್ಧ ಕೇಸು
ಪುಣೆ: ಕೈಯ್ಯಲ್ಲಿ ಪಿಸ್ತೂಲು ಹಿಡಿದು ರೈತನನ್ನು ಬೆದರಿಸುತ್ತಿರುವ ಹಳೇ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಾದಿತ ಟ್ರೈನೀ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ಇಲ್ಲಿನ ಮುಲ್ಶಿ ಎಂಬಲ್ಲಿ 25 ಎಕರೆ ಜಾಗವನ್ನು ಕೊಂಡಿದ್ದ ಖೇಡ್ಕರ್ ಪರಿವಾರ, ಪಕ್ಕದ ರೈತನ ಜಮೀನನ್ನೂ ವಶಪಡಿಸಿಕೊಳ್ಳಲು ಯತ್ನಿಸಿತ್ತು. ಇದನ್ನು ರೈತರು ವಿರೋಧಿಸಿದಾಗ ಕೈಯ್ಯಲ್ಲಿ ಪಿಸ್ತೂಲು ಹಿಡಿದು ಬೆದರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಈಗ ಎಫ್‌ಐಆರ್ ದಾಖಲಾಗಿದೆ. ಮನೋರಮಾರ ಬಳಿ ಪಿಸ್ತೂಲಿನ ಪರವಾನಗಿ ಇದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈಗಾಗಲೇ ನಕಲಿ ದಾಖಲೆ ತೋರಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಆರೋಪವನ್ನು ಎದುರಿಸುತ್ತಿರುವ ಟ್ರೈನೀ ಐಎಎಸ್ ಅಧಿಕಾರಿ ಪೂಜಾರ ಪರಿವಾರಕ್ಕೆ ಅಪ್ರಾಮಾಣಿಕ ಮತ್ತು ಕಾನೂನುಬಾಹಿರ ಕುಟುಂಬ ಎಂಬ ಹಣೆಪಟ್ಟಿ ಅಂಟಿದೆ