ಪೋಖ್ರಣ್‌ನಲ್ಲಿ ಸ್ವದೇಶಿ ಸೇನಾ ಆತ್ಮನಿರ್ಭರತೆ ಅನಾವರಣ

| Published : Mar 13 2024, 02:05 AM IST

ಪೋಖ್ರಣ್‌ನಲ್ಲಿ ಸ್ವದೇಶಿ ಸೇನಾ ಆತ್ಮನಿರ್ಭರತೆ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾದ ರಕ್ಷಣಾ ಉಪಕರಣಗಳ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸುವ ‘ಭಾರತ್ ಶಕ್ತಿ’ ವಾರ್‌ ಗೇಮ್‌ ಮಂಗಳವಾರ ರಾಜಸ್ಥಾನದ ಪೋಖ್ರಣ್‌ನಲ್ಲಿ ನಡೆಯಿತು.

ಜೈಸಲ್ಮೇರ್‌: ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾದ ರಕ್ಷಣಾ ಉಪಕರಣಗಳ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸುವ ‘ಭಾರತ್ ಶಕ್ತಿ’ ವಾರ್‌ ಗೇಮ್‌ ಮಂಗಳವಾರ ರಾಜಸ್ಥಾನದ ಪೋಖ್ರಣ್‌ನಲ್ಲಿ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಸೇನೆಯ ಪ್ರಮುಖರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ರಕ್ಷಣಾ ವಲಯದಲ್ಲಿನ ದೇಶದ ಆತ್ಮನಿರ್ಭರತೆಯನ್ನು ಭಾರತದ ಯುದ್ಧವಿಮಾನಗಳು ಹಾಗೂ ಸೇನಾ ಸಲಕರಣೆಗಳು ಪ್ರದರ್ಶಿಸಿದವು.

ಏನೇನು ಪ್ರದರ್ಶನ?:

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಿದ್ದ ಇಂಥ ಕಾರ್ಯಕ್ರಮದಲ್ಲಿ ಎಲ್‌ಸಿಎ ತೇಜಸ್‌, ಎಎಲ್‌ಎಚ್‌ ಎಂಕೆ-ಐವಿ, ಎಲ್‌ಸಿಎಚ್‌ ಪ್ರಚಂಡ್‌, ಮೊಬೈಲ್‌ ಆ್ಯಂಟಿ ಡ್ರೋನ್‌ ಸಿಸ್ಟಮ್‌, ಬಿಎಂಪಿ-2, ನಾಗ್‌ ಮಿಸೈಲ್‌ ಕ್ಯಾರಿಯರ್‌, ಟಿ90 ಟ್ಯಾಂಕ್‌, ಧನುಷ್‌, ಕೆ9 ವಜ್ರ ಮತ್ತು ಪಿನಾಕ ರಾಕೆಟ್‌ ಮೊದಲಾದವುಗಳು ‘ಭಾರತ್‌ ಶಕ್ತಿ’ ಕಾರ್ಯಕ್ರಮದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿ ನೆರೆದವರ ಮೈನವಿರೇಳುವಂತೆ ಮಾಡಿದವು.ಇಂಥದ್ದೊಂದು ಪ್ರದರ್ಶನ ಯಾವುದೇ ದೇಶಗಳ ವಿರುದ್ಧ ಅಲ್ಲವಾದರೂ, ಸೇನೆಯ ಮೂರೂ ಪಡೆಗಳ ಯುದ್ಧ ಸನ್ನದ್ಧತೆ, ದೇಶೀಯ ರಕ್ಷಣಾ ಉಪಕರಣಗಳ ಸಾಮರ್ಥ್ಯ ಅನಾವರಣ, ಜಾಗತಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯದ ಪ್ರದರ್ಶನವಾಗಿತ್ತು ಎಂದು ಸೇನೆಯ ಮೂಲಗಳು ತಿಳಿಸಿವೆ.ಆತ್ಮನಿರ್ಭರತೆ ಅನಾವರಣ: ಮೋದಿ ಹರ್ಷ

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ಆತ್ಮನಿರ್ಭರತೆ, ನಂಬಿಕೆ ಮತ್ತು ಆತ್ಮಾಭಿಮಾನಕ್ಕೆ ಇಂದು ಪೋಖ್ರಣ್‌ ಸಾಕ್ಷಿಯಾಗಿದೆ’ ಎಂದು ಬಣ್ಣಿಸಿದರು. ಇದೇ ವೇಳೆ ಹಿಂದಿನ ಸರ್ಕಾರಗಳು ಸೇನಾ ಸಲಕರಣೆ ಖರೀದಿಯಲ್ಲಿ ಹಗರಣ ನಡೆಸಿದರೆ ನಾವು ಸೇನಾಪಡೆಯ ಬಲವರ್ಧನೆಗೆ ಆದ್ಯತೆ ನೀಡಿದೆವು ಎಂದು ಕಾಂಗ್ರೆಸ್‌ ಪಕ್ಷವನ್ನು ಕುಟುಕಿದರು.