ಸಾರಾಂಶ
ನಮ್ಮನ್ನು ಅಲ್ಪಸಂಖ್ಯಾತರೆಂದರೆ ನಾವು ಒಪ್ಪುವುದಿಲ್ಲ ಮುಂದೊಂದು ದಿನ ಭಾರತದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಲಿದ್ದಾರೆ. ಇದಕ್ಕಾಗಿ ಮುಸ್ಲಿಂ ಸಮುದಾಯ ತಮ್ಮ ಜನಸಂಖ್ಯೆ ವೃದ್ಧಿಸಬೇಕು ಮತ್ತು ಬಹುಸಂಖ್ಯಾತರನ್ನು ಹಿಂದಿಕ್ಕಬೇಕು’ ಎಂದು ಟಿಎಂಸಿ ನಾಯಕ ಫಿರ್ಹದ್ ಹಕೀಂ ಪ್ರಚೋದನಾಕಾರಿ ಹೇಳಿಕೆ
ಕೋಲ್ಕತಾ: ‘ನಮ್ಮನ್ನು ಅಲ್ಪಸಂಖ್ಯಾತರೆಂದರೆ ನಾವು ಒಪ್ಪುವುದಿಲ್ಲ. ಅಲ್ಲಾನ ಕೃಪೆ ಇದ್ದರೆ ಮುಂದೊಂದು ದಿನ ಭಾರತದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಲಿದ್ದಾರೆ. ಇದಕ್ಕಾಗಿ ಮುಸ್ಲಿಂ ಸಮುದಾಯ ತಮ್ಮ ಜನಸಂಖ್ಯೆ ವೃದ್ಧಿಸಬೇಕು ಮತ್ತು ಬಹುಸಂಖ್ಯಾತರನ್ನು ಹಿಂದಿಕ್ಕಬೇಕು’ ಎಂದು ಟಿಎಂಸಿ ನಾಯಕ, ಕೋಲ್ಕತಾದ ಮೇಯರ್ ಫಿರ್ಹದ್ ಹಕೀಂ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಸುಕಾಂತ ಮಜುಂದಾರ್, ‘ಬಂಗಾಳವನ್ನು ಬಾಂಗ್ಲಾದೇಶದಂತೆ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕರು ಮುಂದಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
ಹಕೀಂ ಹೇಳಿದ್ದೇನು?:ಮುಸ್ಲಿಂ ವಿದ್ಯಾರ್ಥಿಗಳ ಸಭೆ ಉದ್ದೇಶಿಸಿ ಮಾತನಾಡಿದ ಫಿರ್ಹದ್ ಹಕೀಂ, ‘ಮುಸ್ಲಿಮರು ಸಶಕ್ತರಾಗುವ ಮೂಲಕ ತಮ್ಮ ದನಿಯನ್ನು ಕೇಳುವಂತೆ ಮಾಡಬೇಕು ಮತ್ತು ಅಭಿವೃದ್ಧಿ ಹಾಗೂ ನ್ಯಾಯದ ಬೇಡಿಕೆಗಳು ಈಡೇರುವಂತೆ ನೋಡಿಕೊಳ್ಳಬೇಕು’ ಎಂದರು.
‘ಪ. ಬಂಗಾಳದಲ್ಲಿ ನಾವು ಶೇ.33ರಷ್ಟಿದ್ದೇವೆ ಮತ್ತು ದೇಶದಲ್ಲಿ ಮುಸ್ಲಿಮರ ಪಾಲು ಶೇ.17ರಷ್ಟಿದೆ. ನಮ್ಮನ್ನು ಅಲ್ಪಸಂಖ್ಯಾತರೆಂದು ಕರೆಯಲಾಗುತ್ತದೆ. ಆದರೆ ನಮ್ಮನ್ನು ನಾವು ಹಾಗೆ ಅಂದುಕೊಂಡಿಲ್ಲ. ಅಲ್ಲಾನ ದಯೆ ಮತ್ತು ಬೋಧನೆಗಳು ನಮ್ಮೊಂದಿಗಿದ್ದರೆ ನಾವು ಬಹುಸಂಖ್ಯಾತರಿಗಿಂತಲೂ ದೊಡ್ಡವರಾಗುತ್ತೇವೆ. ನ್ಯಾಯಾಂಗದಲ್ಲಿ ನಮ್ಮ ಪಾಲು ಹೆಚ್ಚಾಗಬೇಕಾದ ತುರ್ತು ಅಗತ್ಯವಿದೆ’ ಎಂದರು.