ಟ್ರಕ್‌ಗಳು ದಿನಕ್ಕೆ 800 ಕಿ.ಮೀ.ಸಂಚರಿಸಲು ಕೇಂದ್ರ ಸರ್ಕಾರ ಮಾಸ್ಟರ್‌ ಪ್ಲಾನ್‌ ತಯಾರಿ

| Published : Sep 30 2024, 01:18 AM IST / Updated: Sep 30 2024, 05:53 AM IST

ಸಾರಾಂಶ

2047 ರ ವೇಳೆಗೆ ಭಾರತದಲ್ಲಿ ಟ್ರಕ್‌ಗಳು ದಿನಕ್ಕೆ 800 ಕಿ.ಮೀ. ಸಂಚರಿಸಲು ಸಾಧ್ಯವಾಗುವಂತೆ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ಮಾರ್ಪಡಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಈ ಯೋಜನೆಯು ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.

ನವದೆಹಲಿ: ದೇಶದ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳ ರೂಪಾಂತರಕ್ಕಾಗಿ ಕೇಂದ್ರ ಸರ್ಕಾರ ಮಾಸ್ಟರ್‌ ಪ್ಲಾನ್‌ವೊಂದನ್ನು ತಯಾರಿಸುತ್ತಿದೆ. ಇದು ಜಾರಿಗೆ ಬಂದರೆ 2047ರ ಹೊತ್ತಿಗೆ ದೇಶದಲ್ಲಿ ಟ್ರಕ್‌ಗಳು ದಿನವೊಂದಕ್ಕೆ 800 ಕಿ.ಮೀ. ಸಂಚರಿಸಲು ಸಾಧ್ಯವಾಗಲಿದೆ. ತನ್ಮೂಲಕ ಸರಕು ಸಾಗಣೆ ವೆಚ್ಚ ಭಾರಿ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ ಎಂದು ಹೇಳಲಾಗಿದೆ.

ಸದ್ಯ ದೇಶದಲ್ಲಿ ದಿನವೊಂದಕ್ಕೆ ಟ್ರಕ್‌ ಅಥವಾ ಲಾರಿಗಳು ಹೆಚ್ಚೆಂದರೆ 300ರಿಂದ 350 ಕಿ.ಮೀ. ದೂರ ಕ್ರಮಿಸುತ್ತಿವೆ. ಯುರೋಪ್‌ ಹಾಗೂ ಅಮೆರಿಕಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ. ಯುರೋಪ್‌ನಲ್ಲಿ ಟ್ರಕ್‌ಗಳು 750 ಕಿ.ಮೀ. ಸಂಚರಿಸಿದರೆ, ಅಮೆರಿಕದಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ 1100ರಿಂದ 1200 ಕಿ.ಮೀ.ವರೆಗೆ ಕ್ರಮಿಸಲು ಕಾನೂನುಬದ್ಧ ಅನುಮತಿ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಸ್ಟರ್‌ ಪ್ಲಾನ್‌ನಂತೆ 2047ರ ವೇಳೆಗೆ ಎಕ್ಸ್‌ಪ್ರೆಸ್‌ವೇ ಹಾಗೂ ಹೊಸ ಹೆದ್ದಾರಿಗಳು ನಿರ್ಮಾಣವಾದರೆ, ಸರಕು ಸಾಗಣೆ ವೆಚ್ಚ ಶೇ.3ರಿಂದ ಶೇ.4ರಷ್ಟು ತಗ್ಗಲಿದೆ. ಸದ್ಯ ಈ ವೆಚ್ಚ ಶೇ.7.8ರಿಂದ ಶೇ.8.9ರಷ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.