ಸಾರಾಂಶ
ಏ.2ರಿಂದ ಭಾರತದ ಮೇಲೆ ಶೇ.25ರಷ್ಟು ಪ್ರತೀಕಾರದ ತೆರಿಗೆ ಹೇರುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚತುರ’ ಹಾಗೂ ‘ಒಳ್ಳೆಯ ಸ್ನೇಹಿತ’ ಎಂದು ಕರೆದಿದ್ದಾರೆ.
ನ್ಯಾಯಾರ್ಕ್/ವಾಷಿಂಗ್ಟನ್: ಏ.2ರಿಂದ ಭಾರತದ ಮೇಲೆ ಶೇ.25ರಷ್ಟು ಪ್ರತೀಕಾರದ ತೆರಿಗೆ ಹೇರುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚತುರ’ ಹಾಗೂ ‘ಒಳ್ಳೆಯ ಸ್ನೇಹಿತ’ ಎಂದು ಕರೆದಿದ್ದಾರೆ. ಅಂತೆಯೇ, ಉಭಯ ದೇಶಗಳ ನಡುವಿನ ತೆರಿಗೆ ಕುರಿತ ಮಾತುಕತೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಅವರೊಂದಿಗೆ ದ್ವಿಪಕ್ಷೀಯ ಹಾಗೂ ಸಮತೋಲಿತ ವ್ಯಾಪಾರ ಸಂಬಂಧದ ಕುರಿತು ಚರ್ಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ.ಸುದ್ದಿಗೋಷ್ಠಿಯಲ್ಲಿ ಮೋದಿ ಅವರ ಅಮೆರಿಕ ಭೇಟಿಯನ್ನು ನೆನಪಿಸಿಕೊಂಡ ಟ್ರಂಪ್, ‘ಅವರು ಒಬ್ಬ ಚತುರ ಹಾಗೂ ಒಳ್ಳೆಯ ಗೆಳೆಯ ಆಗಿದ್ದಾರೆ. ಇಬ್ಬರ ನಡುವೆ ಉತ್ತಮ ಮಾತುಕತೆ ನಡೆಯಿತು. ಉಭಯ ದೇಶಗಳ ನಡುವಿನ ತೆರಿಗೆ ಮಾತುಕತೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನನಗಿದೆ. ನಿಮಗೆ (ಭಾರತೀಯರಿಗೆ) ಮಹಾನ್ ಪ್ರಧಾನಿ ಸಿಕ್ಕಿದ್ದಾರೆ’ ಎಂದರು. ಜೊತೆಗೇ, ‘ಭಾರತವು ಇಡೀ ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ. ಇದು ಕ್ರೂರ ನಡೆ’ ಎಂದೂ ಕಿಡಿಕಾರಿದರು.
ಈ ನಡುವೆ, ‘ಮಿಸ್ರಿಯವರೊಂದಿಗೆ ನ್ಯಾಯಯುತ ಮತ್ತು ಸಮತೋಲಿತ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಸಾಧಿಸಲು ನಡೆಯುತ್ತಿರುವ ಯತ್ನಗಳು, ರಕ್ಷಣೆ ಮತ್ತು ತಂತ್ರಜ್ಞಾನದಲ್ಲಿ ಸಹಯೋಗವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಹೇಳಿದ್ದಾರೆ.