ಸಾರಾಂಶ
ಡೊನಾಲ್ಡ್ ಟ್ರಂಪ್, ತಮ್ಮ ಕಟ್ಟಾ ಬೆಂಬಲಿಗರಾದ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್ ಅವರನ್ನು ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ನೇಮಿಸಿದ್ದಾರೆ. ಈ ಮೂಲಕ ವಿವೇಕ್ ರಾಮಸ್ವಾಮಿ ಬಳಿಕ ಮತ್ತೊಬ್ಬ ಹಿಂದೂ ಧರ್ಮೀಯರಿಗೆ ಟ್ರಂಪ್ ಆಡಳಿತದಲ್ಲಿ ಮಹತ್ವದ ಹುದ್ದೆ ಲಭಿಸಿದಂತಾಗಿದೆ.
ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಕಟ್ಟಾ ಬೆಂಬಲಿಗರಾದ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್ ಅವರನ್ನು ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ನೇಮಿಸಿದ್ದಾರೆ. ಈ ಮೂಲಕ ವಿವೇಕ್ ರಾಮಸ್ವಾಮಿ ಬಳಿಕ ಮತ್ತೊಬ್ಬ ಹಿಂದೂ ಧರ್ಮೀಯರಿಗೆ ಟ್ರಂಪ್ ಆಡಳಿತದಲ್ಲಿ ಮಹತ್ವದ ಹುದ್ದೆ ಲಭಿಸಿದಂತಾಗಿದೆ.
ಅಮೆರಿಕ ಗುಪ್ತಚರ ವಿಭಾಗ ಮಹತ್ಬದ ಸರ್ಕಾರಿ ಅಂಗವಾಗಿದ್ದು, ತುಳಸಿ ಇನ್ನು18 ಗೂಢಚಾರ ಸಂಸ್ಥೆಗಳ ಮೇಲುಸ್ತುವಾರಿ ವಹಿಸಲಿದ್ದಾರೆ. ಇಸ್ರೇಲ್ ಸುತ್ತಲಿನ ಸಂಘರ್ಷದ ವಾತಾವರಣ, ಉಕ್ರೇನ್-ರಷ್ಯಾ ಯುದ್ಧ, ಮಧ್ಯಪ್ರಾಚ್ಯದಲ್ಲಿನ ಅಶಾಂತಿ ಏರ್ಪಟ್ಟಿರುವಾಗ ಅಮೆರಿಕದ ನಡೆಗಳು ಗುಪ್ತಚರ ಮಾಹಿತಿ ಮೇಲೆಯೇ ಅವಲಂಬಿತವಾಗಿವೆ.
ತುಳಸಿ ಗಬ್ಬಾರ್ಡ್ ಮೂಲತಃ ಡೆಮಾಕ್ರೆಟಿಕ್ ಪಕ್ಷದವರು. 2020ರ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದಿಂದ ನಾಮನಿರ್ದೇಶನಕ್ಕೆ ಒಳಗಾಗಲು ಯತ್ನಿಸಿ ವಿಫಲರಾಗಿದ್ದರು ಹಾಗೂ ಜೋ ಬೈಡೆನ್ ಅರವನ್ನು ಬೆಂಬಲಿಸಿದ್ದರು. ಆದರೆ 2022ರಲ್ಲಿ ಆ ಪಕ್ಷ ತೊರೆದು ರಿಪಬ್ಲಿಕನ್ ನಾಯಕ ಟ್ರಂಪ್ ಅವರ ಕಟ್ಟಾ ಬೆಂಬಲಿಗರಾದರು. ತುಳಸಿ 4 ಬಾರಿ ಸಂಸದೆಯಾಗಿ ಕೆಲಸ ಮಾಡಿದ್ದಾರೆ ಹಾಗೂ ಮೊದಲ ಅಮೆರಿಕದ ಮೊದಲ ಹಿಂದೂ ಮಹಿಳಾ ಸಂಸದೆ ಎಂಬ ಖ್ಯಾತಿ ಪಡೆದಿದ್ದಾರೆ. ಸೇನೆಯಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿದೆ.
ಭಾರತೀಯ ನಂಟಿಲ್ಲ!
ತುಳಸಿ ಹೆಸರು ಕೇಳಿದಾಗ ಅವರು ಭಾರತೀಯರು ಎಂದು ಅನೇಕರು ಹೇಳುತ್ತಾರೆ. ಆದರೆ ಅಚ್ಚರಿ ಎಂಬಂತೆ ಅವರಿಗೆ ಯಾವುದೇ ಭಾರತೀಯ ನಂಟಿಲ್ಲ. ಅವರ ತಂದೆಯ ಹೆಸರು ಮೈಕ್ ಗಬ್ಬಾರ್ಡ್, ತಾಯಿ ಕ್ಯಾರೋಲ್ ಪೋರ್ಟರ್ ಗಬ್ಬಾರ್ಡ್. ಕ್ಯಾರೋಲ್ ಹಿಂದೂ ಧರ್ಮಕ್ಕೆ ಮತಾಂತರ ಆದ ನಂತರ ತಮ್ಮ ಮಕ್ಕಳಿಗೂ ಹಿಂದೂ ಹೆಸರಿಟ್ಟಿದ್ದರು. ತುಳಸಿ ಕೂಡಾ ಹಿಂದೂ ಧರ್ಮ ಪಾಲಿಸುತ್ತಾರೆ. ಮೊದಲ ಬಾರಿಗೆ ಸಂಸದೆಯಾದಾಗ ಭಗವದ್ಗೀತೆ ಮೇಲೆ ಕೈಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದರು.