ಸಾರಾಂಶ
ವಾಷಿಂಗ್ಟನ್: ದೇಶದ ಆರ್ಥಿಕತೆಯಲ್ಲಿ ಬಹುದೊಡ್ಡ ಪಾಲನ್ನು ನುಂಗಿ ಹಾಕುತ್ತಿರುವ ರಕ್ಷಣಾ ಬಜೆಟ್ ಅನ್ನು ಶೇ.50ರಷ್ಟು ಕಡಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ವಿಶೇಷವೆಂದರೆ ತಮ್ಮ ದೇಶದ್ದು ಮಾತ್ರವಲ್ಲದೇ ರಷ್ಯಾ, ಚೀನಾ ದೇಶಗಳಿಗೂ ಇದೇ ಪ್ಲಾನ್ ಅಳವಡಿಕೆಗೂ ಟ್ರಂಪ್ ಯೋಜಿಸಿದ್ದಾರೆ.
ಅಣ್ವಸ್ತ್ರ ಉತ್ಪಾದನೆಯಲ್ಲಿ ಮುಂಚೂಣಿ ದೇಶಗಳಾಗಿರುವ ಅಮೆರಿಕ, ರಷ್ಯಾ, ಚೀನಾ, ತಮ್ಮ ರಕ್ಷಣಾ ವೆಚ್ಚದಲ್ಲಿ ಶೇ.50ರಷ್ಟನ್ನು ಕೇವಲ ಅಣ್ವಸ್ತ್ರಗಳಿಗೆ ಮೀಸಲಿಡುತ್ತಿವೆ. ಹೀಗಾಗಿ ಈ ಮೂರು ದೇಶಗಳ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಒಟ್ಟಾರೆ ರಕ್ಷಣಾ ವೆಚ್ಚವನ್ನು ಶೇ.50ರಷ್ಟು ಕಡಿತದ ಪ್ರಸ್ತಾಪವನ್ನು ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದಾರೆ. ಈ ಬಗ್ಗೆ ವಿಶ್ವದ ಅತಿ ದೊಡ್ಡ ಪರಮಾಣು ದೇಶಗಳಗಾಗಿರುವ ರಷ್ಯಾ ಹಾಗೂ ಚೀನಾ ಜತೆ ಮಾತುಕತೆ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರೀ ಅಣ್ವಸ್ತ್ರಕ್ಕಾಗಿಯೇ ಶತಕೋಟಿ ಡಾಲರ್‌ಗಳಷ್ಟು ಹಣವನ್ನು ವ್ಯಯ ಮಾಡಲಾಗುತ್ತಿದೆ. ಈ ಅಣ್ವಸ್ತ್ರಗಳಿಂದ 50 ಬಾರಿ ಅಥವಾ 100 ಬಾರಿ ವಿಶ್ವವನ್ನು ವಿನಾಶ ಮಾಡಬಹುದು. ಆದರೆ ಇದು ಸಲ್ಲದು. ಇದೇ ಹಣವನ್ನು ಅನ್ಯ ಉದ್ದೇಶಕ್ಕೆ ನಾವು ಬಳಸಬಹುದು. ಹೀಗಾಗಿ ಅಮೆರಿಕವು ಚೀನಾ ಹಾಗೂ ರಷ್ಯಾ ಜತೆ ಅಣ್ವಸ್ತ್ರದ ಮೇಲೆ ಹಣ ವಿನಿಯೋಗ ಕಡಿಮೆ ಮಾಡುವ ಮಾತುಕತೆ ನಡೆಸಲು ಉತ್ಸುಕವಾಗಿದೆ’ ಎಂದರು.ಅಮೆರಿಕ ಹಾಗೂ ರಷ್ಯಾ ಶೀತಲ ಸಮರ ಯುಗದಿಂದಲೇ ಅಣ್ವಸ್ತ್ರ ಹೊಂದಿವೆ. ಚೀನಾ ಇದೇ ಮಟ್ಟವನ್ನು ಇನ್ನು 6 ವರ್ಷದಲ್ಲಿ ಮುಟ್ಟಬಹುದು ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದರು.
ತಲಾ 970 ಕೋಟಿ ರು. ವೆಚ್ಚದ ಎಫ್ 35 ಯುದ್ಧವಿಮಾನ ಖರೀದಿ ಅಗತ್ಯವೇ?: ಕಾಂಗ್ರೆಸ್
ನವದೆಹಲಿ: ಅಮೆರಿಕದಿಂದ ಎಫ್35ನಂತಹ ದುಬಾರಿ ಯುದ್ಧ ವಿಮಾನಗಳನ್ನು ಭಾರತ ಖರೀದಿಸುವ ಅಗತ್ಯವಿದೆಯೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಯವರ ಇತ್ತೀಚಿನ ಅಮೆರಿಕ ಭೇಟಿ ಸಂದರ್ಭದಲ್ಲಿ, ಹೊಸ ರಕ್ಷಣಾ ಪಾಲುದಾರಿಕೆ ಭಾಗವಾಗಿ ಎಫ್35 ಯುದ್ಧವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುರ್ಜೇವಾಲಾ, ‘ಎಫ್35 ವಿಶ್ವದ ಅತ್ಯಂತ ದುಬಾರಿ ಯುದ್ಧವಿಮಾನ. ಒಂದು ವಿಮಾನದ ಬೆಲೆ ಸುಮಾರು 968 ಕೋಟಿ ರು.ಗಳಷ್ಟಿದೆ. ಅದನ್ನು ಒಂದು ಗಂಟೆ ಹಾರಿಸಲು 28 ಲಕ್ಷ ರು. ವೆಚ್ಚವಾಗುತ್ತದೆ. ಇಷ್ಟು ದುಬಾರಿ ಬೆಲೆಯ ವಿಮಾನವನ್ನು ತರಿಸುವ ಅಗತ್ಯವಿದೆಯೇ?, ಇಂಥ ಖರೀದಿ ಭಾರತದ ರಕ್ಷಣ ಹಿತಾಸಕ್ತಿಗಳಿಗೆ ಅನುಗುಣವಾಗಿ ಇದೆಯೇ? ಸ್ವತಃ ಅಮೆರಿಕದ ರಕ್ಷಣಾ ಇಲಾಖೆಯೇ ಎಫ್ 35 ವಿಮಾನ ನಮ್ಮ ನಿರ್ವಹಣಾ ಬೇಡಿಕೆಗೆ ಅನುಗುಣವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಜೊತೆಗೆ ಅದರಲ್ಲಿ 65 ತಾಂತ್ರಿಕ ದೋಷಗಳಿಗೆ ಎಂದು ಹೇಳಿದೆ. ಹೀಗಿರುವಾಗ ಭಾರತಕ್ಕೆ ಈ ವಿಮಾನದ ಅವಶ್ಯಕತೆ ಇತ್ತೇ ’ ಎಂದು ಪ್ರಶ್ನಿಸಿದ್ದಾರೆ.