ಸಾರಾಂಶ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ, ಹಲವು ವಿವಾದಾತ್ಮಕ ನಿರ್ಧಾರ ಪ್ರಕಟಿಸಿರುವ ಡೊನಾಲ್ಡ್ ಟ್ರಂಪ್‌ರ ಕಣ್ಣು ಇದೀಗ ಯುದ್ಧಪೀಡಿತ ಗಾಜಾದ ಮೇಲೆ ಬಿದ್ದಿದೆ. ಪನಾಮಾ ಕಾಲುವೆ, ಗ್ರೀನ್‌ಲ್ಯಾಂಡ್ ಹಾಗೂ ಕೆನಡಾವನ್ನು ಅಮೆರಿಕದ ಭಾಗವಾಗಿಸಿಕೊಳ್ಳುವ ಮಾತನಾಡಿದ್ದ ಟ್ರಂಪ್, ಇದೀಗ ಗಾಜಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಘೋಷಿಸಿದ್ದಾರೆ. ಇದು ಹಲವು ದೇಶಗಳ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ‘ಅಮೆರಿಕವು ಗಾಜಾ ಪಟ್ಟಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲಿ ಸ್ಫೋಟಗೊಳ್ಳದೆ ಉಳಿದ ಬಾಂಬ್ ನಿಷ್ಕ್ರಿಯಗೊಳಿಸಿ, ಧ್ವಂಸಗೊಂಡ ಕಟ್ಟಡಗಳನ್ನು ತೆರವುಗೊಳಿಸಿ ಆರ್ಥಿಕ ಅಭಿವೃದ್ಧಿ ಮಾಡುತ್ತೇವೆ. ಎಲ್ಲಾ ಜನರಿಗೆ ಉದ್ಯೋಗ ಹಾಗೂ ವಸತಿಯನ್ನು ಒದಗಿಸುತ್ತೇವೆ’ ಎಂದಿದ್ದಾರೆ.
ಇದೇ ವೇಳೆ 20 ಲಕ್ಷ ಪ್ಯಾಲೆಸ್ತೀನಿಯರು ಗಾಜಾದಿಂದ ಜಾಗ ಖಾಲಿ ಮಾಡಬೇಕು ಎಂದಿರುವ ಟ್ರಂಪ್, ‘ಅವರಿಗೆ ಬೇರೆ ನೆಲೆಯಿಲ್ಲದ ಕಾರಣ ಮುರಿದುಬಿದ್ದ ಕಟ್ಟಡಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನೆಲೆಸಿದ್ದಾರೆ. ಇದರ ಬದಲು ಅವರೆಲ್ಲ ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಇರಬಹುದು. ಅವಶ್ಯಕತೆಯಿದ್ದರೆ ಇದಕ್ಕಾಗಿ ಸೇನಾ ನೆರವನ್ನೂ ನೀಡುತ್ತೇವೆ ಎಂದಿದ್ದಾರೆ. ಟ್ರಂಪ್‌ರ ಹೇಳಿಕೆಯನ್ನು ನೆತನ್ಯಾಹು ಸ್ವಾಗತಿಸಿದ್ದಾರೆ.
ವಿರೋಧ:
ಗಾಜಾ ವಶಪಡಿಸಿಕೊಳ್ಳುವ ಟ್ರಂಪ್ ಹೇಳಿಕೆಯನ್ನು ಈಜಿಪ್ಟ್, ಜೋರ್ಡನ್, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಮಧ್ಯಪ್ರಾಚ್ಯ ದೇಶಗಳು ವಿರೋಧಿಸಿವೆ. ‘ನಾವು ಮೊದಲೇ ಹೇಳಿದಂತೆ ಪ್ಯಾಲೆಸ್ತೀನ್ ಸ್ವತಂತ್ರ ದೇಶವಾಗಿರಬೇಕು. ಅಲ್ಲಿನ ಜನರ ಸ್ಥಳಾಂತರವನ್ನು ನಾವು ಬೆಂಬಲಿಸುವುದಿಲ್ಲ’ ಎಂದು ಈ ದೇಶಗಳು ಹೇಳಿವೆ. ಇತ್ತ ಅಮೆರಿಕದಲ್ಲಿ ಟ್ರಂಪ್‌ರ ವಿರೋಧ ಪಕ್ಷವೂ ಅವರ ನಿರ್ಧಾರವನ್ನು ‘ಆಕ್ಷೇಪಾರ್ಹ,ಅಪಾಯಕಾರಿ, ಮೂರ್ಖತನ’ ಎಂದು ಕರೆದಿದ್ದು, ಹೀಗೆ ಮಾಡುವುದರಿಂದ ಜಗತ್ತಿನ ನಂಬಿಕೆ ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದೆ.
ಕಾಂಗ್ರೆಸ್ ಕಳವಳ:
ಈ ನಡುವೆ ಡೊನಾಲ್ಡ್ ಟ್ರಂಪ್ ಘೋಷಣೆಗೆ ಭಾರತದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಟ್ರಂಪ್ ನಿರ್ಧಾರ ವಿಲಕ್ಷಣ, ಅಪಾಯಕಾರಿ ಮತ್ತು ಸ್ವೀಕಾರಾರ್ಹವಲ್ಲ. ಮೋದಿ ಸರ್ಕಾರ ತಮ್ಮ ನಿಲುವನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸಬೇಕು ಎಂದಿದೆ.