ಸಾರಾಂಶ
ತಮ್ಮ ದೇಶದ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರುವ ರಾಷ್ಟ್ರಗಳ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ ಮಂಗಳವಾರದಿಂದ ಮೆಕ್ಸಿಕೋ ಹಾಗೂ ಕೆನಡಾದ ಮೇಲೆ ಜಾರಿಯಾಗಿದೆ.
ವಾಷಿಂಗ್ಟನ್: ತಮ್ಮ ದೇಶದ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರುವ ರಾಷ್ಟ್ರಗಳ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ ಮಂಗಳವಾರದಿಂದ ಮೆಕ್ಸಿಕೋ ಹಾಗೂ ಕೆನಡಾದ ಮೇಲೆ ಜಾರಿಯಾಗಿದೆ. ಕಳೆದ ತಿಂಗಳೇ ಈ ನೀತಿ ಜಾರಿಯಾಗಿತ್ತಾದರೂ, ಎರಡೂ ದೇಶಗಳು ಮಾತುಕತೆಗೆ ಮುಂದಾದ ಕಾರಣ ಅದಕ್ಕೆ ಟ್ರಂಪ್ ಒಂದು ತಿಂಗಳ ತಡೆ ನೀಡಿದ್ದರು. ಆ ತಡೆ ಇದೀಗ ತೆರವಾಗಿದ್ದು ಮಂಗಳವಾರದಿಂದಲೇ ಶೇ.25ರಷ್ಟು ಹೆಚ್ಚುವರಿ ತೆರಿಗೆ ಜಾರಿಯಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಫೆಬ್ರವರಿಯಲ್ಲೇ ತೆರಿಗೆ ಘೋಷಣೆಯಾಗಿತ್ತಾದರೂ, ಒಂದು ತಿಂಗಳು ತಡವಾಗಿ ಜಾರಿಗೊಳಿಸಲಾಗಿದೆ.
ಈ ಕ್ರಮದ ಮೂಲಕ ಮೆಕ್ಸಿಕೋ ಹಾಗೂ ಕೆನಡಾದಿಂದ ಅಕ್ರಮವಾಗಿ ಬರುವ ವಲಸಿಗರನ್ನು ತಡೆಯಲು ಹಾಗೂ ಅವುಗಳೊಂದಿಗಿನ ವ್ಯಾಪಾರ ಅಸಮತೋಲನವನ್ನು ಸರಿದೂಗಿಸಲು ಟ್ರಂಪ್ ಬಯಸಿದ್ದಾರೆ. ಅತ್ತ, ಚೀನಾ ಮೇಲೆ ಹೇರಲಾಗಿದ್ದ ಶೇ.10ರಷ್ಟು ತೆರಿಗೆ ದ್ವಿಗುಣವಾಗಿ ಶೇ.20ರಷ್ಟಾಗಲಿದೆ.ಷೇರು ಮಾರುಕಟ್ಟೆ ಕುಸಿತ:
ಟ್ರಂಪ್ ತೆರಿಗೆ ಘೋಷಿಸುತ್ತಿದ್ದಂತೆ ಹಣದುಬ್ಬರ ಏರಿಕೆಯ ಸಾಧ್ಯತೆ ಅಧಿಕವಾಗಿದೆ. ಪರಿಣಾಮವಾಗಿ, ಅಮೆರಿಕದ ಷೇರು ಮಾರುಕಟ್ಟೆ ಸೂಚ್ಯಂಕ ಎಸ್&ಪಿ 500 ಸೋಮವಾರ ಶೇ.2ರಷ್ಟು ಕುಸಿದಿದೆ. ಆದರೆ ಟ್ರಂಪ್ ಸರ್ಕಾರ ಮಾತ್ರ, ಈ ಕ್ರಮದಿಂದ ಅಮೆರಿಕದ ಉತ್ಪಾದನೆ ಹೆಚ್ಚಿ, ವಿದೇಶಿ ಹೂಡಿಕೆ ಹರಿದುಬರುತ್ತದೆ ಎಂಬ ವಿಶ್ವಾಸದಲ್ಲಿದೆ.ತೆರಿಗೆಗೆ ತಿರುಗೇಟು:
ಟ್ರಂಪ್‌ರ ತೆರಿಗೆ ಹೇರಿಕೆಯನ್ನು ಅಸಮರ್ಥನೀಯ ಎಂದಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ‘ಇದರಿಂದಾಗಿ ಅಮೆರಿಕದ ಜನ ಅಗತ್ಯ ವಸ್ತುಗಳಿಗೆ ಅಧಿಕ ಪಾವತಿಸಬೇಕಾಗುತ್ತದೆ ಹಾಗೂ ಸಾವಿರಾರು ಜನ ಕೆಲಸ ಕಳೆದುಕೊಳ್ಳುತ್ತಾರೆ’ ಎಂದಿದ್ದಾರೆ. ಜೊತೆಗೆ, ‘ಅಮೆರಿಕ ತನ್ನ ತೆರಿಗೆಯನ್ನು ಹಿಂಪಡೆಯುವ ವರೆಗೆ 2 ಹಂತದಲ್ಲಿ, ಅಲ್ಲಿಂದ ಆಮದಾಗುವ 1.7 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳ ಮೇಲೆ ಶೇ.25ರಷ್ಟು ಸುಂಕಗಳನ್ನು ಹಾಕಲಾಗುವುದು’ ಎಂದು ತಿಳಿಸಿದ್ದಾರೆ. ಅತ್ತ ಮೆಕ್ಸಿಕೋ ಪ್ರಧಾನಿ ಕ್ಲೌಡಿಯಾ ಶೀನ್ಬಂ ಮಾತನಾಡಿ, ‘ನಮ್ಮ ಬಳಿ ಅನೇಕ ಯೋಜನೆಗಳಿವೆ’ ಎಂದಿದ್ದಾರೆ.ಅತ್ತ ಚೀನಾ, ಅಮೆರಿಕದ ಆಮದುಗಳ ಮೇಲೆ, ಮಾ.10ರಿಂದ ಜಾರಿಗೆ ಬರುವಂತೆ ಶೇ.15ರಷ್ಟು ತೆರಿಗೆ ಘೋಷಿಸಿದೆ. ಜೊತೆಗೆ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಕಾನೂನು ಸಮರವನ್ನೂ ಆರಂಭಿಸಿದೆ.