ಸಾರಾಂಶ
ಇಸ್ರೇಲ್-ಇರಾನ್ ಕದನದಲ್ಲಿ ಟ್ರಂಪ್ ಡೀಲ್ ರಹಸ್ಯ
ಸಂಧಾನ ಸುಸೂತ್ರಕ್ಕೆ ಪೌರೋಹಿತ್ಯ ವಹಿಸಿದ್ದ ಕತಾರ್==
ವಾಷಿಂಗ್ಟನ್: ಇಸ್ರೇಲ್-ಇರಾನ್ ಕದನಕ್ಕೆ ಅಮೆರಿಕ ಪ್ರವೇಶದಿಂದ ಯುದ್ಧ ಇನ್ನಷ್ಟು ತೀವ್ರಗೊಳ್ಳಬಹುದು ಎಂಬ ಆತಂಕದ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ನಡುವೆ 12 ದಿನಗಳ ಬಳಿಕ ಕದನವಿರಾಮ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಧಾನದಲ್ಲಿ ಕತಾರ್ ಕೂಡ ಪ್ರಮುಖ ಪಾತ್ರ ವಹಿಸಿದೆ.ಇರಾನ್ ಅಣ್ವಸ್ತ್ರ ಹೊಂದದಂತೆ ತಡೆಯುವುದು ಈ ಸಂಘರ್ಷದ ಆದ್ಯ ಗುರಿಯಾಗಿದ್ದು, ಅಮೆರಿಕ ಭಾರೀ ಕಾರ್ಯಾಚರಣೆ ನಡೆಸಿ ಅದರ ಅಣು ಕೇಂದ್ರಗಳನ್ನು ನಾಶ ಮಾಡಿದ ಬೆನ್ನಲ್ಲೇ ಕದನವಿರಾಮದ ಒಪ್ಪಂದ ಮಾಡಿಸಿದ್ದಾರೆ. ಈ ವೇಳೆ, ಯುದ್ಧ ಸ್ಥಗಿತಕ್ಕೆ ಇರಾನ್ ಮನವೊಲಿಸುವಲ್ಲಿ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥನಿ ಯಶಸ್ವಿಯಾಗಿದ್ದಾರೆ.
ಸೋಮವಾರ ತನ್ನ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಹೊರತಾಗಿಯೂ ಕದನ ವಿರಾಮದತ್ತ ಹೆಜ್ಜೆ ಹಾಕಿದ್ದ ಟ್ರಂಪ್,, ತಮ್ಮ ಬದ್ಧ ವೈರಿ ದೇಶ ಇರಾನ್ ಜೊತೆಗೆ ಸಂಧಾನದ ಮಾತುಕತೆ ನಡೆಸಲು ಉಪಾಧ್ಯಕ್ಷ ಜೆ.ಡಿ. ವಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರಿಗೆ ಹೊಣೆ ವಹಿಸಿದ್ದರು.ಮತ್ತೊಂದೆಡೆ ಅಧಿಕಾರಿಗಳಿಗೆ ‘ಬೀಬಿ’ಗೆ ಕರೆ ಮಾಡಿ ಎಂದು ಹೇಳಿ ಸ್ವತಃ ತಾವೇ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆ ಒಪ್ಪಿಸಿದ್ದಾರೆ. ಟ್ರಂಪ್‌ರ ಈ ಕದನ ವಿರಾಮಕ್ಕೆ ಎರಡೂ ಕಡೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿ ಮಂಗಳವಾರ ಬೆಳಗ್ಗೆ ಕದನ ವಿರಾಮ ಘೋಷಣೆಯಾಗಿದೆ.
ಇಸ್ರೇಲ್ ಒಪ್ಪಿದ್ದೇಕೆ?:ಕದನ ವಿರಾಮ ಕುರಿತು ನೆತನ್ಯಾಹು ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇರಾನ್‌ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಯನ್ನು ಕೊನೆಗೊಳಿಸುವವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ. ಆದ್ದರಿಂದ ಟ್ರಂಪ್ ಅವರ ಕದನವಿರಾಮದ ಪ್ರಸ್ತಾವನೆಯನ್ನು ಒಪ್ಪಿದ್ದೇವೆ. ಇದರಲ್ಲಿ ಸಹಕರಿಸಿದ ಟ್ರಂಪ್ ಹಾಗೂ ಅಮೆರಿಕಕ್ಕೆ ಧನ್ಯವಾದ’ ಎಂದು ತಿಳಿಸಿದೆ. ಜತೆಗೆ, ಇರಾನ್‌ನಿಂದ ವಿರಾಮ ಉಲ್ಲಂಘನೆಯಾದರೆ ತೀಕ್ಷ್ಣ ಪ್ರತಿಕ್ರಿಯೆ ನೀಡುವುದಾಗಿಯೂ ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ಕದನವಿರಾಮದ ಬಗ್ಗೆ ತಮ್ಮ ಟ್ರುತ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ‘ಗುರಿ ಸಾಧನೆಯ ಬಳಿಕ ಇಸ್ರೇಲ್ ಮತ್ತು ಇರಾನ್ ಕದನವಿರಾಮಕ್ಕೆ ಒಪ್ಪಿವೆ’ ಎಂದು ಘೋಷಿಸಿದ್ದರು.==
12 ದಿನಗಳ ಸಮರದಿಂದ ಯಾರಿಗೆ ಏನು ಲಾಭ?-ಇರಾನ್‌ನ ಪರಮಾಣು ಶಕ್ತಿ ಕಸಿದ ಅಮೆರಿಕ
ಇರಾನ್ ಅಣ್ವಸ್ತ್ರವನ್ನು ಹೊಂದದಂತೆ ತಡೆಯಲು ಹಲವು ವರ್ಷಗಳಿಂದ ನಾನಾ ವಿಧದಲ್ಲಿ ಪ್ರಯತ್ನಿಸುತ್ತಿದ್ದ ಅಮೆರಿಕ, ಈ ಕದನಕ್ಕೆ ಪ್ರವೇಶಿಸಿ ಇರಾನ್‌ನ ಅಣುಕೇಂದ್ರಗಳನ್ನು ಸರ್ವನಾಶಗೈದಿದೆ. ಈ ಮೂಲಕ, ತನ್ನ ಮಹದುದ್ದೇಶ ಈಡೇರಿಸಿಕೊಂಡಿದೆ. ಇದಕ್ಕೆಂದು ಅಮೆರಿಕ ತನ್ನ ವಿಶೇಷ ಅಸ್ತ್ರಗಳಾದ ಬಿ-2 ಬಾಂಬರ್, ಟಾಮ್‌ಹಾಕರ್‌ಗಳನ್ನು ಹೊರತೆಗೆದಿದ್ದರೂ, ತನ್ನ ಕಡೆ ಚೂರೂ ಹಾನಿ ಅಥವಾ ಸಾವುನೋವಾಗದಂತೆ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ಮುಗಿಸಿ ಬಂದಿದೆ. ಇದಾದ ಬಳಿಕ, ಇಸ್ರೇಲ್-ಇರಾನ್ ನಡುವೆ ಕದನವಿರಾಮ ನಡೆದದ್ದೂ ಅಮೆರಿಕದ ಮಧ್ಯಸ್ಥಿಕೆಯಲ್ಲಿ. ಇದರಿಂದ ಟ್ರಂಪ್ ಅವರಿಗಾದ ವೈಯಕ್ತಿಕ ಲಾಭವೆಂದರೆ, ಮತ್ತೊಮ್ಮೆ ‘ಕದನವಿರಾಮ ಮಾಡಿಸಿದ್ದು ನಾನೇ’ ಎಂದು ಹೇಳಿಕೊಂಡು ಸ್ವಪ್ರಶಂಸೆ ಮಾಡಿಕೊಳ್ಳಲು ಅವರಿಗಿದು ಸುವರ್ಣಾವಕಾಶವಾಗಿದೆ.=ವೈರಿರಾಷ್ಟ್ರದ ಮೇಲೆ ಇಸ್ರೇಲ್ ಮೇಲುಗೈ
ಹುಟ್ಟಿದಾಗಿಂದ ಕಾದಾಡುತ್ತಾ, ಸಂಘರ್ಷಗಳ ನಡುವೆಯೇ ಬೆಳೆದುನಿಂತಿರುವ ಇಸ್ರೇಲ್, ಇರಾನ್ ಜತೆಗಿನ ಯುದ್ಧದಲ್ಲಿ ಮೇಲುಗೈ ಸಾಧಿಸಿತ್ತು. ಜೂ.13ರಂದು ಇರಾನ್ ಒಳಗೇ ತಾನು ಗೌಪ್ಯವಾಗಿ ನಿರ್ಮಿಸಿದ್ದ ನೆಲೆಗಳಿಂದಲೇ ವೈರಿರಾಷ್ಟ್ರದ ಮೇಲೆ ಮುಗಿಬಿದ್ದು, ಇರಾನ್ ವಾಯುರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ, ಕಷ್ಟವಿಲ್ಲದೆ ಅದರ ಆಗಸದ ಮೇಲೆ ಅಧಿಪತ್ಯ ಸಾಧಿಸಿತ್ತು. ಅಂತೆಯೇ, ಇರಾನ್‌ನ ಸೇನಾ ಜನರಲ್ ಮೊಹಮ್ಮದ್ ಬಘೇರಿ, ಗುಪ್ತಚರ ಮುಖ್ಯಸ್ಥ ಬ್ರಿ. ಜ. ಮೊಹಮ್ಮದ್ ಕಾಜೆಮಿ ಸೇರಿದಂತೆ ರೆವಲ್ಯೂಷನರಿ ಗಾರ್ಡ್ಸ್‌ನ ದೊಡ್ಡದೊಡ್ಡ ತಲೆಗಳನ್ನು ಉರುಳಿಸಿತ್ತು. ಜತೆಗೆ ದಾಳಿಯಲ್ಲಿ ಅಮೆರಿಕದ ನೆರವು ಸಿಕ್ಕಿದ್ದು ಇಸ್ರೇಲ್ ಬೆನ್ನಿಗೆ ವಿಶ್ವದ ದೊಡ್ಡಣ್ಣ ಸದಾ ನಿಲ್ಲುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವಂತಿತ್ತು.==ಪ್ರಬಲ ದಾಳಿಯ ಸಹಿಸಿದ ಖ್ಯಾತಿ ಇರಾನ್ ಪಾಲು
ತನ್ನ ಸೇನಾ ಹಾಗೂ ಗುಪ್ತಚರ ಸಾಮರ್ಥ್ಯದಿಂದ ಹೆಸರಾಗಿರುವ ಇಸ್ರೇಲ್ ಹಾಗೂ ವಿಶ್ವದ ದೊಡ್ಡಣ್ಣ ಅಮೆರಿಕದ ದಾಳಿಯ ಹೊರತಾಗಿಯೂ ಹಿಂದೆ ಸರಿಯದೆ ಅವುಗಳನ್ನು ಹಿಮ್ಮೆಟ್ಟಿಸಿದೆವು ಎಂದು ಇರಾನ್ ಎದೆಯುಬ್ಬಿಸಿ ಹೇಳಬಹುದು. ಈ ಮೂಲಕ, ಇಸ್ರೇಲ್‌ನಿಂದ ಹೊಡೆಸಿಕೊಂಡೆವು ಎಂಬ ಅಪಖ್ಯಾತಿಯಿಂದ ಬಚಾವಾಗಿ ಮುಖ ಉಳಿಸಿಕೊಳ್ಳುವಲ್ಲಿ ಇರಾನ್ ಯಶಸ್ವಿಯಾಗುತ್ತದೆ. ಇದಕ್ಕೆ, ‘ಪ್ರತಿದಾಳಿ ಮಾಡಿ, ಆದರೆ ಸಂಘರ್ಷ ಉಲ್ಬಣಿಸದಂತೆ ನೋಡಿಕೊಳ್ಳಿ’ ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ನೀಡಿದ ಆದೇಶವೇ ಸಾಕ್ಷಿ. ತನ್ನ ಭೂಗತ ಫೋರ್ಡೋ ಸೇರಿದಂತೆ ಹಲವು ಅಣು ಕೇಂದ್ರಗಳನ್ನು ನಾಶ ಮಾಡಿ ಮೆರೆದ ಅಮೆರಿಕಕ್ಕೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ, ಅದರಲ್ಲೂ ಕತಾರ್‌ನಲ್ಲಿರುವ ಅದರ ಬೃಹತ್ ಸೇನಾನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡುವ ಮೂಲಕ ಇರಾನ್ ಪ್ರತ್ಯುತ್ತರ ನೀಡಿತು. ಈ ದಾಳಿಗೂ ಮೊದಲೇ ಆ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಲಾಗಿತ್ತು ಎಂದು ವರದಿಯಾಗಿದ್ದು, ಇದು ಮುಖ ಉಳಿಸಿಕೊಳ್ಳುವ ಮತ್ತೊಂದು ಯತ್ನವಾಗಿದೆ.