ಸಾರಾಂಶ
ತಿರುಪತಿ: ಸರಾಸರಿಗಿಂತ ಕಡಿಮೆ ಮುಂಗಾರು ಮಳೆಯಿಂದಾಗಿ ಶ್ರೀಕ್ಷೇತ್ರ ತಿರುಮಲದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಡ್ಯಾಂಗಳಲ್ಲಿ 120-130 ದಿನಕ್ಕೆ ಸಾಕಾಗುವಷ್ಟು ಮಾತ್ರ ನೀರಿದೆ.
ಹೀಗಾಗಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿರುವ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯು (ಟಿಟಿಡಿ) ಭಕ್ತರು ನೀರನ್ನು ಮಿತವಾಗಿ ಬಳಸಬೇಕು ಎಂದು ಸೂಚಿಸಿದೆ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಬಳಕೆಗೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
ತಿರುಮಲವು ಪಾಪವಿನಾಶನಂ ಅಣೆಕಟ್ಟು, ಆಕಾಶ ಗಂಗೆ, ಗೋಗರ್ಭಂ, ಕುಮಾರಧಾರ-ಪಸುಪುಧಾರ ಮತ್ತು ಕಲ್ಯಾಣಿ ಅಣೆಕಟ್ಟಿನಿಂದ ನೀರಿನ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ವೆಂಕಟೇಶ್ವರ ದೇವಸ್ಥಾನ ದಿನಕ್ಕೆ ಸುಮಾರು 70 ಸಾವಿರದಿಂದ 1 ಲಕ್ಷ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ ಮತ್ತು ದಿನಕ್ಕೆ ಸುಮಾರು 43 ಲಕ್ಷ ಗ್ಯಾಲನ್ ನೀರು ಅಗತ್ಯವಿದೆ. ಆದರೆ, ಈ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟವು ವೇಗವಾಗಿ ಖಾಲಿಯಾಗುತ್ತಿರುವುದು ತಿರುಪತಿ ಟ್ರಸ್ಟ್‌ಗೆ ಕಳವಳ ಉಂಟುಮಾಡಿದೆ.
ಈ ಮುಂಗಾರಿನಲ್ಲಿ ಆಂಧ್ರಪ್ರದೇಶದ ಅನೇಕ ಕಡೆ ಉತ್ತಮ ಮಳೆ ಆಗಿದ್ದರೂ, ತಿರುಪತಿ ಭಾಗವು ಮಾತ್ರ ಮಳೆ ಕೊರತೆ ಎದುರಿಸುತ್ತಿದೆ. ಟಿಟಿಡಿ ಪ್ರಕಾರ, ತಿರುಮಲ ಸುತ್ತಲಿನ ಎಲ್ಲ 5 ಅಣೆಕಟ್ಟುಗಳ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 14,304 ಲಕ್ಷ ಗ್ಯಾಲನ್‌ಗಳು. ಆದಾಗ್ಯೂ, ಈಗ ಕೇವಲ 5,800 ಲಕ್ಷ ಗ್ಯಾಲನ್ ಮಾತ್ರ ಲಭ್ಯವಿದೆ.
ಈ ನೀರು ಇನ್ನು 120-130 ದಿನಗಳಿಗೆ ಮಾತ್ರ ಸಾಕಾಗುತ್ತದೆ. ಈಗ ಮಳೆ ಬಾರದೇ ಹೋದರೆ ಡಿಸೆಂಬರ್ ನಂತರ ಜಲಕ್ಷಾಮ ಉಂಟಾಗುವ ಭೀತಿ ಇದೆ.ಆದ್ದರಿಂದ ಇಲ್ಲಿ ನಿತ್ಯ ಆಗಮಿಸಿವ ಭಕ್ತರು ಹಾಗೂ ಮುಂಬರುವ ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿ, ಬ್ರಹ್ಮೋತ್ಸವ ಸೇರಿದಂತೆ ಹಲವು ಹಬ್ಬಗಳಲ್ಲಿ ಇಲ್ಲಿ ನೆರೆಯುವ ಲಕ್ಷಾಂತರ ಜನರು ನೀರನ್ನು ಮಿತವಾಗಿ ಬಳಸಬೇಕು. ಇದೇ ಸನ್ನಿವೇಶ ಮುಂದುವರಿದರೆ ಮುಂದಿನ ದಿನಗಳಲ್ಲಿ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನೀರು ಪೂರೈಕೆ ಕಡಿಮೆ ಮಾಡಬಹುದು ಎಂದು ದೇವಸ್ಥಾನಂ ಅಧಿಕಾರಿಗಳು ತಿಳಿಸಿದ್ದಾರೆ.ದೇವಸ್ಥಾನದಲ್ಲಿ ನಿತ್ಯ ಒಂದಿಲ್ಲೊಂದು ಅಚರಣೆ ಇರುತ್ತದೆ. ವರ್ಷಕ್ಕೆ ಒಟ್ಟು 450 ಹಬ್ಬಗಳನ್ನು ದೇಗುಲದಲ್ಲಿ ಆಚರಿಸಲಾಗುತ್ತದೆ.