2024ರಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ 2.55 ಕೋಟಿ ಜನ ಭೇಟಿ ₹1365 ಕೋಟಿ ಸಂಗ್ರಹ

| Published : Jan 03 2025, 12:32 AM IST / Updated: Jan 03 2025, 04:46 AM IST

ಸಾರಾಂಶ

ಇಲ್ಲಿನ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ 2024ನೇ ಇಸವಿಯಲ್ಲಿ 2.55 ಕೋಟಿ ಜನರು ಭೇಟಿ ನೀಡಿದ್ದು, ದಾಖಲೆಯ 1,365 ಕೋಟಿ ರು. ಹುಂಡಿ ಕಾಣಿಕೆ ಸಂಗ್ರಹವಾಗಿದೆ.

ತಿರುಪತಿ: ಇಲ್ಲಿನ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ 2024ನೇ ಇಸವಿಯಲ್ಲಿ 2.55 ಕೋಟಿ ಜನರು ಭೇಟಿ ನೀಡಿದ್ದು, ದಾಖಲೆಯ 1,365 ಕೋಟಿ ರು. ಹುಂಡಿ ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ 150 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಭಕ್ತರು ಕಾಣಿಕೆಯಾಗಿ ದೇವಸ್ಥಾನಕ್ಕೆ ನೀಡಿದ್ದಾರೆ. 2024ರಲ್ಲಿ 99 ಲಕ್ಷ ಜನರು ಮುಡಿ ಸಮರ್ಪಣೆ ಮಾಡಿದ್ದಾರೆ. 6.30 ಕೋಟಿ ಜನರು ಅನ್ನ ಪ್ರಸಾದ ಸ್ವೀಕರಿಸಿದ್ದು, 12.14 ಕೋಟಿ ಲಡ್ಡು ಪ್ರಸಾದ ಮಾರಾಟವಾಗಿದೆ. ಡಿ.31ರ ಒಂದೇ ದಿನ ಹುಂಡಿಯಲ್ಲಿ 4.10 ಕೋಟಿ ರು. ಸಂಗ್ರಹವಾಗಿದೆ. ಕೋವಿಡ್‌ ಬಳಿಕ ದಿನದ ಸರಾಸರಿ ಹುಂಡಿ ಕಾಣಿಕೆಯು 3 ಕೋಟಿ ರು. ದಾಟಿದೆ.

ಯುಪಿ: ಸಿಲಿಂಡರ್‌, ಲೋಹ ತುಂಡಿಟ್ಟು ರೈಲು ಹಳಿ ತಪ್ಪಿಸುವ ದುಷ್ಕೃತ್ಯ ಪತ್ತೆ

ಕಾನ್ಪುರ: ಉತ್ತರ ಪ್ರದೇಶದಲ್ಲಿ ಒಂದೇ ದಿನ ಎರಡು ಕಡೆಗಳಲ್ಲಿ ರೈಲು ಹಳಿ ತಪ್ಪಿಸುವ ದುಷ್ಕೃತ್ಯ ನಡೆದಿದೆ. ಸಹರಾನ್‌ಪುರದಲ್ಲಿ ಹಳಿ ಮೇಲೆ ಲೋಹದ ತುಂಡು ಪತ್ತೆಯಾಗಿದ್ದರೆ, ಕಾನ್ಪುರದಲ್ಲಿ ಖಾಲಿ ಸಿಲಿಂಡರ್ ಪತ್ತೆಯಾಗಿದೆ. ಸಹರಾನ್‌ಪುರದಲ್ಲಿ ಹರಿದ್ವಾರಕ್ಕೆ ಸಂಪರ್ಕಿಸುವ ರೈಲು ಮಾರ್ಗದ ಟಾಪ್ರಿ ಬಳಿಯ ರೈಲು ಹಳಿ ಮೇಲೆ ಲೋಹದ ದೊಡ್ಡ ತುಂಡುಗಳು ಪತ್ತೆಯಾಗಿದೆ. ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದು ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಮತ್ತೊಂದೆಡೆ ಕಾನ್ಪುರದ ಬರಜ್‌ಪುರ ರೈಲು ನಿಲ್ದಾಣ ಸಮೀಪದಲ್ಲಿ ಹಳಿಗಳ ಮೇಲೆ 5 ಕೇಜಿಯ ಖಾಲಿ ಗ್ಯಾಸ್‌ ಸಿಲಿಂಡರ್‌ನ್ನು ಕಿಡಿಗೇಡಿಗಳು ಇರಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುರಕ್ಷಿತ ತಂಡ ಗಸ್ತು ತಿರುಗುತ್ತಿದ್ದಾಗ ಸಿಲಿಂಡರ್ ಪತ್ತೆ ಹಚ್ಚಿದ್ದು, ಅಲ್ಲಿಂದ ತೆರವುಗೊಳಿಸಿದ್ದಾರೆ.

ದೆಹಲಿ ವಿವಿ ಕಾಲೇಜಿಗೆ ಸಾವರ್ಕರ್‌ ಬದ್ಲು ಸಿಂಗ್‌ ಹೆಸರಿಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ನೂತನ ಕಾಲೇಜಿಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಹೆಸರಿಡುವ ನಿರ್ಧಾರವನ್ನು ಕಾಂಗ್ರೆಸ್‌ ವಿರೋಧಿಸಿದೆ. ವಿವಿಯು, ನಜಾಫ್‌ಗಢ ಹಾಗೂ ದ್ವಾರಕಾದಲ್ಲಿ 600 ಕೋಟಿ ರು. ವೆಚ್ಚದಲ್ಲಿ 1 ಕಾನೂನು ಕಾಲೇಜು ಸೇರಿದಂತೆ 3 ಕಾಲೇಜು ಸ್ಥಾಪಿಸಲು ಉದ್ದೇಶಿಸಿದೆ. ಈ ಪೈಕಿ ನಜಾಫ್‌ಗಢದ ಕಾಲೇಜಿಗೆ ಸಾವರ್ಕರ್‌ ಹೆಸರಿಡಲು ತೀರ್ಮಾನಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದು, ‘ಕಾಲೇಜಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಹೆಸರಿಟ್ಟರೆ ಒಳ್ಳೆಯದಿತ್ತು. ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠರಾಗಿದ್ದು ಪೊಲೀಸರ ಮಾಹಿತಿದಾರರಾಗಿದ್ದವರನ್ನು ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರನಂತೆ ಬಿಂಬಿಸಲು ಯತ್ನಿಸುತ್ತಿದೆ. ಆದರೆ ಸತ್ಯ ಎಲ್ಲರಿಗೂ ಗೊತ್ತಿದೆ’ ಎಂದು ಕಾಂಗ್ರೆಸ್‌ ಸಂಸದ ನಾಸೀರ್‌ ಹುಸೇನ್‌ ಟೀಕಿಸಿದ್ದಾರೆ. ಅತ್ತ ಕಾಂಗ್ರೆಸ್‌ನ ಭಾಗವಾದ ಎನ್‌ಎಸ್‌ಯುಐ ಕಾಲೇಜಿಗೆ ಡಾ. ಮನಮೋಹನ್‌ ಸಿಂಗ್‌ ಅವರ ಹೆಸರಿಡುವಂತೆ ಪ್ರಧಾನಿಯವರಿಗೆ ಪತ್ರದ ಮುಖೇನ ಆಗ್ರಹಿಸಿದೆ.

ಸೆನ್ಸೆಕ್ಸ್‌ 1436 ಅಂಕಗಳ ಏರಿಕೆ: 2 ದಿನಕ್ಕೆ ಸಂಪತ್ತು ₹8.5 ಲಕ್ಷ ಕೋಟಿ ಹೆಚ್ಚಳ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 1436 ಅಂಕಗಳ ಭಾರೀ ಏರಿಕೆ ಕಂಡು 79943ರಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 445 ಅಂಕ ಏರಿಕೆ ಕಂಡು 24188ರಲ್ಲಿ ಕೊನೆಗೊಂಡಿದೆ. ದೇಶೀಯ ಹೂಡಿಕೆದಾರರ ಆಸಕ್ತಿ ಹೆಚ್ಚಳ, ಆಟೋಮೊಬೈಲ್‌, ಐಟಿ ವಲಯದ ಉತ್ತಮ ಪ್ರಗತಿ ಷೇರುಪೇಟೆಗೆ ಉತ್ತಮ ಬಲ ನೀಡಿತು ಎನ್ನಲಾಗಿದೆ. ಬುಧವಾರ ಕೂಡಾ ಸೆನ್ಸೆಕ್ಸ್‌ 368 ಅಂಕ ಏರಿತ್ತು. ಅಂದರೆ 2 ದಿನದಲ್ಲಿ ಸೆನ್ಸೆಕ್ಸ್‌ ಒಟ್ಟು 1804 ಅಂಕ ಏರಿದ್ದು ಹೂಡಿಕೆದಾರರ ಸಂಪತ್ತು 8.5 ಲಕ್ಷ ಕೋಟಿ ರು.ಹೆಚ್ಚಿದೆ.

ಮಂಗಳಸೂತ್ರ ಕಸಿಯುತ್ತಿರುವ ಕೇಂದ್ರ ಸರ್ಕಾರ: ಕಾಂಗ್ರೆಸ್‌ ಕಿಡಿ

ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳು ಮತ್ತು ಪಕ್ಷಪಾತಗಳಿಂದ ದೇಶದಲ್ಲಿ ಚಿನ್ನದ ಸಾಲ ಪಡೆದು ಮರು ಪಾವತಿಸದವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ಮಂಗಳ ಸೂತ್ರ ಕಸಿದುಕೊಳ್ಳಲು ಕೇಂದ್ರ ಸರ್ಕಾರ ಪ್ರಮುಖ ಕಾರಣವಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

2024ರ ಮಾರ್ಚ್‌ನಿಂದ ಜೂನ್ ಅವಧಿಯಲ್ಲಿ ಚಿನ್ನದ ಸಾಲದ ಪ್ರಮಾಣ ಎನ್‌ಪಿಎ ಶೇ.30ರಷ್ಟು ಏರಿಕೆಯಾಗಿದೆ ಎಂಬ ಆರ್‌ಬಿಐ ವರದಿ ಬೆನ್ನಲ್ಲೇ ಕಾಂಗ್ರೆಸ್‌ ಈ ಆರೋಪ ಮಾಡಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಮೋದಿ ಸರ್ಕಾರದ ನೀತಿಗಳಿಂದಾಗಿ ಕುಟುಂಬಗಳು ಸಂಕದಷ್ಟದಲ್ಲಿದೆ. ಭಾರತೀಯ ಕುಟುಂಬಗಳು 3 ಲಕ್ಷ ಕೋಟಿ ರು.ನಷ್ಟು ಚಿನ್ನದ ಸಾಲ ಪಡೆದುಕೊಂಡಿವೆ. ಆದರೆ ಆರ್ಥಿಕ ಸ್ಥಿತಿಗತಿಯಿಂದಾಗಿ ಮರುಪಾವತಿ ಸಾಧ್ಯವಾಗುತ್ತಿಲ್ಲ. ಇಂಥ ವೇಳೆ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಮಂಗಳಸೂತ್ರವನ್ನೇ ಕಳೆದುಕೊಳ್ಳುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ’ ಎಂದು ಕಿಡಿಕಾರಿದ್ದಾರೆ.