- ಟಿವಿಕೆ ಸರ್ಕಾರದ ಪರ 144 ಶಾಸಕರ ಬೆಂಬಲ
- ಎಐಎಡಿಎಂಕೆಯ 25 ಶಾಸಕರಿಂದಲೂ ಬೆಂಬಲ- ಸರ್ಕಾರ ವಿರುದ್ಧ 22 ಮತ, ಡಿಎಂಕೆ ಸಭಾತ್ಯಾಗ ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲದೊಂದಿಗೆ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು 118 ಮತಗಳ ಅಗತ್ಯವಿತ್ತು. ಆದರೆ, ಟಿವಿಕೆ ಸರ್ಕಾರ ಪ್ರತಿಪಕ್ಷ ಡಿಎಂಕೆಯ ಸಭಾತ್ಯಾಗದ ನಡುವೆಯೂ 144 ಶಾಸಕರ ಬೆಂಬಲ ಗಳಿಸಿದೆ. ಈ ಮೂಲಕ ಟಿವಿಕೆ ನೇತೃತ್ವದ ಹೊಸ ಸರ್ಕಾರ ಮೊದಲ ಅಗ್ನಿಪರೀಕ್ಷೆಯಲ್ಲಿ ಗೆದ್ದಂತಾಗಿದೆ.ಎಎಡಿಎಂಕೆಯ 47 ಶಾಸಕರಲ್ಲಿ ಎಸ್‌ಪಿ ವೇಲುಮಣಿ ಮತ್ತು ಸಿ.ವಿ.ಷಣ್ಮುಗಂ ನೇತೃತ್ವದ 25 ಶಾಸಕರು ನಿರೀಕ್ಷೆಯಂತೆ ಟಿವಿಕೆ ಪರ ಮತಚಲಾಯಿಸಿದ್ದು, ಪಳನಿಸ್ವಾಮಿ ನೇತೃತ್ವದ ಇತರೆ ಶಾಸಕರು ವಿಶ್ವಾಸಮತದ ವಿರುದ್ಧ ಮತಹಾಕಿದ್ದಾರೆ. ಪ್ರಮುಖ ಪ್ರತಿಪಕ್ಷವಾದ ಡಿಎಂಕೆಯ 57 ಶಾಸಕರು ಸಭಾತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಕೇವಲ 22 ಮತಗಳು ಸರ್ಕಾರದ ವಿರುದ್ಧವಾಗಿ ಬಿದ್ದಿದ್ದರೆ, ಬಿಜೆಪಿಯ ಒಬ್ಬ ಹಾಗೂ ಪಿಎಂಕೆ ಪಕ್ಷದ ನಾಲ್ಕು ಶಾಸಕರು ತಟಸ್ಥವಾಗಿ ಉಳಿದಿದ್ದರು.ಅಣ್ಣಾಡಿಎಂಕೆ ಬಣದ 25 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ. ಅವರ ವಿರುದ್ಧ ಎಡಪ್ಪಾಡಿ ಬಣ ಮುಂದೇನು ಕ್ರಮ ಕೈಗೊಳ್ಳುತ್ತದೆ ಎಂಬ ಕುತೂಹಲ ಇದೀಗ ಎಲ್ಲರಲ್ಲಿ ಮೂಡಿದೆ.
ಬೆಳಗ್ಗೆ 9.30ಕ್ಕೆ ಸಿಎಂ ವಿಜಯ್ ಅವರು ವಿಶ್ವಾಸ ಮತ ಯಾಚನೆ ನಿರ್ಣಯ ಮಂಡಿಸಿದರು. ಆ ಬಳಿಕ ಎಲ್ಲಾ ಪಕ್ಷಗಳ ಮುಖಂಡರು ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಅಂತಿಮ ವಿಶ್ವಾಸಮತ ಯಾಚಿಸಲಾಯಿತು.
ತಮಿಳುನಾಡು ವಿಧಾನಸಭೆಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅಚ್ಚರಿಯೆಂಬಂತೆ 107 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತದ ಕೊರತೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ ಮತ್ತು ಐಯುಎಂಎಲ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚನೆಯಾಗಿತ್ತು.
ಕುದುರೆ ವ್ಯಾಪಾರದ ಆರೋಪ:ಟಿವಿಕೆ ಪಕ್ಷವು ಕುದುರೆ ವ್ಯಾಪಾರದ ಮೂಲಕ ಬಹುಮತ ಸಾಬೀತುಪಡಿಸಿದೆ. ಈ ಸರ್ಕಾರ ಸಾಲಪಡೆದ ಮಿತ್ರರು ಮತ್ತು ಎಐಎಡಿಎಂಕೆ ಪಕ್ಷವನ್ನು ಒಡೆದು ಅಸ್ತಿತ್ವ ಪಡೆದುಕೊಂಡಿದೆ ಎಂದು ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಉದಯನಿದಿ ಸ್ಟಾಲಿನ್ ಆರೋಪಿಸಿದ್ದಾರೆ.