ಸಾರಾಂಶ
ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಸ್ತಾರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಜಿಲ್ಲಾ ಮೀಸಲು ಪೊಲೀಸ್ ಪಡೆ (ಡಿಆರ್‌ಜಿ) ಮತ್ತು ಕೋಬ್ರಾ ಬೆಟಾಲಿಯನ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎನ್‌ಕೌಂಟರ್ ಸ್ಥಳದಿಂದ ಇಬ್ಬರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್ ತಿಳಿಸಿದ್ದಾರೆ.
ಈ ಎನ್ಕೌಂಟರ್‌ನೊಂದಿಗೆ, ಈ ವರ್ಷ ರಾಜ್ಯದಲ್ಲಿ ಒಟ್ಟು 83 ನಕ್ಸಲರು ಹತರಾದಂತಾಗಿದೆ.
ಮೌಂಟ್ ಎವರೆಸ್ಟ್ ಚಾರಣಕ್ಕೆ ಮತ್ತೆ ಅವಕಾಶ: ದ್ವಾರ ತೆರೆದ ಚೀನಾ
ಬೀಜಿಂಗ್: ಜನವರಿಯಲ್ಲಿ ಕಂಡು ಕೇಳರಿಯದ ಭೂಕಂಪದಿಂದಾಗಿ ಬಂದ್ ಆಗಿದ್ದ ಜಗತ್ತಿನ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್‌ನ ಚೀನಾ ಪ್ರವೇಶದ್ವಾರವು ಶನಿವಾರ ಪುನಾರಂಭಗೊಂಡಿದೆ. ಇದು ಮೌಂಟ್ ಎವರೆಸ್ಟ್‌ನ ಉತ್ತರ ಭಾಗದಲ್ಲಿದ್ದು ಟಿಬೆಟ್ ಪ್ರಾಂತ್ಯದಿಂದ ಚಾರಣ ಮಾರ್ಗ ಶುರುವಾಗಲಿದೆ.ಜನವರಿಯಲ್ಲಿನ 126 ಸಾವು ಕಂಡ 6.8 ತೀವ್ರತೆಯ ಭೂಕಂಪದಿಂದಾಗಿ ಚೀನಾ ಸರ್ಕಾರವು ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಬಳಿಕ ಅಲ್ಲಿನ ಕೂಲಂಕಷ ಪರಿಶೀಲನೆ, ವಸ್ತುಸ್ಥಿತಿ ಅಧ್ಯಯನದ ಬಳಿಕ ಪ್ರವಾಸಿಗರಿಗೆ ಮುಕ್ತ ಮಾಡಿದೆ.
1961ರಲ್ಲಿ ಚೀನಾ ಮತ್ತು ನೇಪಾಳ ಗಡಿ ಸಮಸ್ಯೆ ಬಗೆಹರಿಸಿಕೊಂಡಾಗಿನಿಂದ ಈ ಮಾರ್ಗದಲ್ಲಿಯೂ ಮೌಂಟ್ ಎವರೆಸ್ಟ್ ಚಾರಣ ಆರಂಭವಾಗಿದೆ. ಕಳೆದ ವರ್ಷ ಈ ಮಾರ್ಗದಿಂದ 5.47 ಲಕ್ಷ ಪ್ರವಾಸಿಗರು ಎವರೆಸ್ಟ್‌ಗೆ ತೆರಳಿದ್ದರು.
ಪೇಪರ್ ಬ್ಯಾಲೆಟ್ ಬಗ್ಗೆ ಚರ್ಚೆಗೆ ಕಾನೂನು ಇಲಾಖೆ ಆಕ್ಷೇಪ
ನವದೆಹಲಿ: ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಕುರಿತು ವಿಚಾರವು ಒಂದು ದೇಶ ಒಂದು ಚುನಾವಣೆ ಕುರಿತು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ ವ್ಯಾಪ್ತಿಯಿಂದ ಹೊರಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ.
ಜಂಟಿ ಸಂಸದೀಯ ಸಮಿತಿಯು ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಎರಡು ವಿಧೇಯಕಗಳ ಕುರಿತು ಪರಿಶೀಲಿಸುತ್ತಿದೆ. ಸಮಿತಿಯ ಕೆಲ ಸದಸ್ಯರು, ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬದಲು ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೆ ತರಲು ಸಲಹೆ ನೀಡಿದ್ದು, ಈ ಕುರಿತು ಕೇಂದ್ರ ಕಾನೂನು ಸಚಿವಾಲಯ ಇಂಥದ್ದೊಂದು ಸ್ಪಷ್ಟನೆ ನೀಡಿದೆ.ಜತೆಗೆ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಾಕಾಲದಲ್ಲಿ ಚುನಾವಣೆ ನಡೆಸುವುದು ಪ್ರಜಾಪ್ರುಭುತ್ವ ವ್ಯವಸ್ಥೆ ವಿರೋಧಿ ಅಲ್ಲ, ಒಕ್ಕೂಟ ವ್ಯವಸ್ಥೆಗೂ ಇದರಿಂದ ಹಾನಿ ಆಗಲ್ಲ ಎಂದು ಹೇಳಿದೆ.
ಜಂಟಿ ಸಂಸದೀಯ ಸಮಿತಿಯು ಸಂವಿಧಾನ ವಿಧೇಯಕ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ವಿಧೇಯಕಗಳ ಕುರಿತು ಪರಿಶೀಲನೆ ನಡೆಸುತ್ತಿದೆ. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಈ ತಿದ್ದುಪಡಿ ವಿಧೇಯಕಗಳು ಸಾಕೇ ಅಥವಾ ಇನ್ನಷ್ಟು ಬದಲಾವಣೆಯ ಅಗತ್ಯವಿದೆಯೇ ಎಂಬ ಕುರಿತು ಈ ಸಮಿತಿ ಸರ್ಕಾರಕ್ಕೆ ವರದಿ ನೀಡಬೇಕಿದೆ.
ಕಾಫಿ ಕುಡಿದು, ಪೇಪರ್ ಓದಿದ ಪೋಪ್: ಕೊಂಚ ಚೇತರಿಕೆ
ರೋಮ್: ಕೆಲ ದಿನಗಳಿಂದ ಉಸಿರಾಟದ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಕೊಂಚ ಸುಧಾರಿಸಿದೆ. ಶುಕ್ರವಾರ ರಾತ್ರಿ ನಿದ್ರಿಸಿ, ಶನಿವಾರ ಬೆಳಗ್ಗೆ ಕಾಫಿ ಕುಡಿದು, ಸುದ್ದಿ ಪತ್ರಿಕೆಯನ್ನು ಪೋಪ್ ಓದಿದರು ಎಂದು ವ್ಯಾಟಿಕನ್ ತಿಳಿಸಿದೆ.ಶುಕ್ರವಾರ ಪೋಪ್ ಅವರು ವಾಂತಿ ಮಾಡುವ ವೇಳೆ ಉಸಿರು ಹಿಂತೆಗೆದುಕೊಳ್ಳುವಾಗ ವಾಂತಿ ಮಾಡಿಕೊಂಡಿದ್ದಲ್ಲದೇ ಅದನ್ನೇ ನುಂಗಿ ತುರ್ತು ಸ್ಥಿತಿ ನಿರ್ಮಾಣವಾಗಿತ್ತು. ಆದರೆ ವೈದ್ಯರು ಪೋಪ್ ಅವರ ಆರೈಕೆ ಮಾಡಿದ ಕಾರಣ ಸಹಜಸ್ಥಿತಿಗೆ ಮರಳಿದ್ದಾರೆ. ಪೋಪ್ ಅವರನ್ನು ವೆಂಟಿಲೇಟರ್ ಸಹಾಯದಿಂದ ಹೊರಗೆ ಇರಿಸಲಾಗಿದೆ. ಅವರ ಉಸಿರಾಟವು ಸಾಮಾನ್ಯದ ಹಾದಿಗೆ ಮರಳುತ್ತಿದೆ ಎಂದು ವ್ಯಾಟಿಕನ್‌ನ ಶನಿವಾರದ ಪ್ರಕಟಣೆ ತಿಳಿಸಿದೆ.
ಇನ್ನೂ ಮರಳದ 6,471 ಕೋಟಿ ರು. ಮೌಲ್ಯದ 2000 ರು. ನೋಟು
ಮುಂಬೈ: ಇಲ್ಲಿಯವರೆಗೆ ಶೇ.98.18ರಷ್ಟು ಅಮಾನ್ಯೀಕರಣಗೊಂಡ 2 ಸಾವಿರ ರು. ಮುಖಬೆಲೆಯ ನೋಟುಗಳ ಬ್ಯಾಂಕುಗಳಿಗೆ ಮರಳಿವೆ. 6,471 ಕೋಟಿ ರು. ಮೌಲ್ಯದ 2000 ರು. ನೋಟು ಇನ್ನೂ ವಾಪಸಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಹೇಳಿದೆ.
‘2023ರ ಮೇ.19ರಂದು ಜನರ ಹಾಗೂ ಉದ್ಯಮದಲ್ಲಿ 3.56 ಲಕ್ಷ ಕೋಟಿ ರು. 2 ಸಾವಿರ ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿದ್ದವು. ನೋಟು ಹಿಂಪಡೆಯುವ ಪ್ರಕ್ರಿಯೆ ಆರಂಭವಾದಾಗಿನಿಂದ 2025ರ ಫೆ.28ರ ಹೊತ್ತಿಗೆ ಜನರ ಬಳಿ ಈಗ 6,471 ಕೋಟಿ ರು. ಮೌಲ್ಯದ 2 ಸಾವಿರ ನೋಟುಗಳು ಮಾತ್ರ ಇವೆ’ ಎಂದು ಹೇಳಿದೆ.
2 ಸಾವಿರ ರು. ನೋಟುಗಳನ್ನು ಹಿಂತಿರುಗಿಸುವ ಪ್ರಕ್ರಿಯೆ ದೇಶದ ಎಲ್ಲ ಬ್ಯಾಂಕುಗಳ ಶಾಖಾ ಕಚೇರಿಗಳಲ್ಲಿ 2023ರ ಅ.7ರ ವರೆಗೆ ಚಾಲ್ತಿಯಲ್ಲಿತ್ತು. ಈಗಲೂ ರಿಸರ್ವ್ ಬ್ಯಾಂಕ್‌ನ 19 ಶಾಖಾ ಕಚೇರಿಗಳಲ್ಲಿ ನೋಟುಗಳ ಬದಲಾವಣೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.ಚಾಲ್ತಿಯಲ್ಲಿನ 2 ಸಾವಿರ ರು. ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ 2023ರ ಮೇ.19 ರಂದು ಘೋಷಿಸಿತ್ತು.