ಕೇರಳದ 2 ರು. ಡಾಕ್ಟರ್ ನಿಧನ

| N/A | Published : Aug 04 2025, 12:30 AM IST / Updated: Aug 04 2025, 01:43 AM IST

ಸಾರಾಂಶ

ಕರ್ನಾಟಕದ ಮಂಡ್ಯದಲ್ಲಿ ಒಬ್ಬ ವೈದ್ಯರು ಈ ಹಿಂದೆ 5 ರು. ವೈದ್ಯ ಎಂದು ಪ್ರಸಿದ್ಧರಾಗಿದ್ದರು. ಅದೇ ರೀತಿ ಕೇರಳದಲ್ಲಿ 2 ರು. ಡಾಕ್ಟರ್‌ ಎಂದೇ ಖ್ಯಾತರಾಗಿದ್ದ ಜನಸ್ನೇಹಿ ವೈದ್ಯ ಎ.ಕೆ. ರೈರು ಗೋಪಾಲ್‌ (80) ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಕಣ್ಣೂರು: ಕರ್ನಾಟಕದ ಮಂಡ್ಯದಲ್ಲಿ ಒಬ್ಬ ವೈದ್ಯರು ಈ ಹಿಂದೆ 5 ರು. ವೈದ್ಯ ಎಂದು ಪ್ರಸಿದ್ಧರಾಗಿದ್ದರು. ಅದೇ ರೀತಿ ಕೇರಳದಲ್ಲಿ 2 ರು. ಡಾಕ್ಟರ್‌ ಎಂದೇ ಖ್ಯಾತರಾಗಿದ್ದ ಜನಸ್ನೇಹಿ ವೈದ್ಯ ಎ.ಕೆ. ರೈರು ಗೋಪಾಲ್‌ (80) ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಇವರ ಅಗಲಿಕೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಕಣ್ಣೂರಿನಲ್ಲಿರುವ ಡಾ। ಗೋಪಾಲ್‌ರ ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ, ‘ಜನಸ್ನೇಹಿ ವೈದ್ಯರಾಗಿರುವ ಇವರು, ಅರ್ಧ ಶತಮಾನ ಕೇವಲ 2 ರು.ಗೆ ಚಿಕಿತ್ಸೆ ನೀಡುವ ಮೂಲಕ, ಆರೋಗ್ಯ ಸೇವೆಯು ಎಲ್ಲರಿಗೂ ಲಭಿಸುವಂತೆ ಮಾಡಿದ್ದರು. ಅವರ ಸೇವಾ ಮನೋಭಾವ ಅಸಂಖ್ಯಾತ ರೋಗಿಗಳಿಗೆ ಸಾಂತ್ವನ ನೀಡಿದೆ’ ಎಂದು ಸ್ಮರಿಸಿದ್ದಾರೆ.

ಡಾ. ಗೋಪಾಲ್ ಅವರನ್ನು ಕೇರಳದ ಅತ್ಯುತ್ತಮ ಕುಟುಂಬ ವೈದ್ಯ ಎಂದು ಗುರುತಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 

ಜನಸ್ನೇಹಿ ವೈದ್ಯ:

50 ವರ್ಷಗಳ ಹಿಂದೆ ಕಣ್ಣೂರಿನ ತಮ್ಮ ಮನೆಯಲ್ಲೇ ಪುಟ್ಟ ಕ್ಲಿನಿಕ್‌ ಪ್ರಾರಂಭಿಸಿದ್ದ ಡಾ। ಗೋಪಾಲ್‌, ಕೇವಲ 2 ರು.ಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈಮೂಲಕ, ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಆಶಾಕಿರಣವಾಗಿದ್ದರು. ಕ್ರಮೇಣ ‘2 ರು. ಡಾಕ್ಟರ್‌’ ಎಂಬ ಹೆಸರು ಪಡೆದಿದ್ದರು. ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲೆಂದು ಬೆಳಗ್ಗೆ 3 ಗಂಟೆಗೆ ಕ್ಲಿನಿಕ್‌ ತೆರೆಯುತ್ತಿದ್ದ ಗೋಪಾಲ್‌, ಕೆಲವೊಮ್ಮೆ ದಿನಕ್ಕೆ 300 ರೋಗಿಗಳ ಆರೋಗ್ಯ ಪರೀಕ್ಷಿಸಿದ್ದೂ ಉಂಟು. ಕ್ರಮೇಣ ಅವರು ತಮ್ಮ ಶುಲ್ಕವನ್ನು 40-50 ರು.ಗೆ ಏರಿಸಿದರೂ, ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ಅದು ತುಂಬಾ ಕಡಿಮೆ ಆಗಿತ್ತು. ಆರೋಗ್ಯ ಹದಗೆಡತೊಡಗಿದ ಕಾರಣ, 2024ರ ಮೇ ತಿಂಗಳಲ್ಲಿ ಡಾ। ಗೋಪಾಲ್‌ ತಮ್ಮ ಕ್ಲಿನಿಕ್‌ ಮುಚ್ಚಿದ್ದರು.

Read more Articles on