ಸಾರಾಂಶ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.
ಇದೇ ವೇಳೆ, ಹಗರಣವೊಂದರಲ್ಲಿ ಸಿಲುಕಿ ಜೈಲುಪಾಲಾಗಿ ಈಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಸೆಂಥಿಲ್ ಬಾಲಾಜಿ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸಲಾಗಿದೆ. ಕೆಲವು ಸಚಿವರ ಖಾತೆ ಬದಲಿಸಲಾಗಿದೆ.ಇಬ್ಬರ ಪ್ರಮಾಣ ವಚನ ಸ್ವೀಕಾರ ಸಂಆರಂಭ ಶನಿವಾರ ಮಧ್ಯಾಹ್ನ 3.30ಕ್ಕೆ ಚೆನ್ನೈನ ರಾಜಭವನದಲ್ಲಿ ನಡೆಯಲಿದೆ.
ಉದಯನಿಧಿ ಅವರ ಪದೋನ್ನತಿಯೊಂದಿಗೆ ಡಿಎಂಕೆ ನೇತಾರ ದಿ. ಎಂ. ಕರುಣಾನಿಧಿ ಕುಟುಂಬದ ಮತ್ತೊಬ್ಬರಿಗೆ ಪ್ರಮುಖ ಹುದ್ದೆ ಒಲಿದಂತಾಗಿದ್ದು, ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿಸಲು ನಾಂದಿ ಹಾಡಿದಂತಾಗಿದೆ.
ಏಕೆಂದರೆ ಕರುಣಾನಿಧಿ ಸಿಎಂ ಆಗಿದ್ದಾಗ ಸ್ಟಾಲಿನ್ ಡಿಸಿಎಂ ಆಗಿದ್ದರು. ಕರುಣಾನಿಧಿ ನಂತರ ಸಿಎಂ ಆದರು. ಹೀಗಾಗಿ ಡಿಎಂಕೆಯ ಮುಂದಿನ ಉತ್ತರಾಧಿಕಾರತ್ವ ಉದಯನಿಧಿ ಪಾಲಾಗಲಿದೆ ಎಂದು ಬಿಂಬಿಸಲಾಗಿದೆ.ಉದಯನಿಧಿ ಕಳೆದ ವರ್ಷ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಇನ್ನು ಬಾಲಾಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿ 2 ದಿನದ ಹಿಂದಷ್ಟೇ ಜಾಮೀನಿನ ಮೇರೆಗೆ ಹೊರಬಂದಿದ್ದಾರೆ.