ಸಾರಾಂಶ
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಕ್ರೇನ್ ನೌಕಾಪಡೆಗೆ ಸೇರಿದ ಅತಿದೊಡ್ಡ ಹಡಗೊಂದು ರಷ್ಯಾ ನಡೆಸಿದ ಮೊದಲ ಸಮುದ್ರ ಡ್ರೋನ್ ದಾಳಿಯಿಂದ ಸ್ಫೋಟಿಸಿ ಮುಳುಗಡೆಯಾಗಿದೆ.
ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಕ್ರೇನ್ ನೌಕಾಪಡೆಗೆ ಸೇರಿದ ಅತಿದೊಡ್ಡ ಹಡಗೊಂದು ರಷ್ಯಾ ನಡೆಸಿದ ಮೊದಲ ಸಮುದ್ರ ಡ್ರೋನ್ ದಾಳಿಯಿಂದ ಸ್ಫೋಟಿಸಿ ಮುಳುಗಡೆಯಾಗಿದೆ.
ಈ ಬಗ್ಗೆ ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಉಕ್ರೇನ್ ಅಧಿಕಾರಿಗಳೂ ದಾಳಿಯನ್ನು ದೃಢಪಡಿಸಿದ್ದಾರೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್ ಮತ್ತು ಆಪ್ಟಿಕಲ್ ವಿಚಕ್ಷಣಕ್ಕಾಗಿ ವಿನ್ಯಾಸಗೊಳಿಸಲಾದ ಮಧ್ಯಮ ಗಾತ್ರದ ಸಿಮ್ಫೆರೋಪೋಲ್ ಹಡಗು ಉಕ್ರೇನ್‌ನ ಒಡೆಸ್ಸಾ ಪ್ರದೇಶದ ದನ್ಯೂಬ್ ನದಿಯಲ್ಲಿದ್ದಾಗ ದಾಳಿ ನಡೆಸಿರುವುದಾಗಿ ರಷ್ಯಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಡ್ರೋನ್ ಬಳಸಿ ಮಾಡಿದ ದಾಳಿ ಇದಾಗಿದೆ. ‘ದಾಳಿಯಿಂದಾಗಿ ಹಡಗಲ್ಲಿದ್ದ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಬಹುತೇಕ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಕಾಣೆಯಾದವರಿಗಾಗಿ ಶೋಧ ನಡೆಯುತ್ತಿದೆ’ ಎಂದು ಉಕ್ರೇನ್ ನೌಕಾಪಡೆಯ ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ.