ಸಾರಾಂಶ
ಕನ್ನಡಿಗರಿಂದ ಬಾಯ್ಕಾಟ್ ಫೋನ್‌ಪೇ ಅಭಿಯಾನ, ಇದರ ಬೆನ್ನಲ್ಲೇ ರಾಯಭಾರಿ ಕಿಚ್ಚ ಸುದೀಪ್ ಒಪ್ಪಂದ ಕಡಿತಗೊಳಿಸುವ ಮಾತುಗಳು ಕೇಳಿಬರುತ್ತಿದ್ದಂತೆ ಫೋನ್‌ಪೇ ಬೆಚ್ಚಿ ಬಿದ್ದಿದೆ
ಬೆಂಗಳೂರು ಕನ್ನಡಿಗರಿಂದ ಬಾಯ್ಕಾಟ್ ಫೋನ್‌ಪೇ ಅಭಿಯಾನ, ಇದರ ಬೆನ್ನಲ್ಲೇ ರಾಯಭಾರಿ ಕಿಚ್ಚ ಸುದೀಪ್ ಒಪ್ಪಂದ ಕಡಿತಗೊಳಿಸುವ ಮಾತುಗಳು ಕೇಳಿಬರುತ್ತಿದ್ದಂತೆ ಫೋನ್‌ಪೇ ಬೆಚ್ಚಿ ಬಿದ್ದಿದೆ. ಇದೀಗ ಬೇಷರತ್ ಕ್ಷಮೆಯಾಚಿಸಿದೆ. ಇಷ್ಟೇ ಅಲ್ಲ ಕನ್ನಡ, ಕರ್ನಾಟಕ, ಇಲ್ಲಿನ ಜನ, ಸಂಸ್ಕೃತಿ ಬಗ್ಗೆ ಅಪಾರ ಗೌರವವಿದ್ದು, ಸರ್ಕಾರದ ನಿಲುವಿಗೆ ಬದ್ಧ ಎಂದು ಪೋನ್‌ಪೆ ಸಂಸ್ಥಾಪಕ ಹಾಗಾ ಸಿಇಒ ಸಮೀರ್ ನಿಮಗ್ ಅಧಿಕೃತವಾಗಿ ಕ್ಷಮೆ ಕೇಳಿದ್ದಾರೆ. ಈ ಕುರಿತು ಕ್ಷಮಾಪಣಾ ಪತ್ರ ಪ್ರಕಟಿಸಿದೆ.
ಸಮೀರ್ ನಿಗಮ್ ಪತ್ರದಲ್ಲಿ, ಫೋನ್‌ಪೇ ಬೆಂಗಳೂರಿನಲ್ಲಿ ಹುಟ್ಟಿದೆ. ಬೆಂಗಳೂರು ಮಣ್ಣಿನೊಂದಿಗೆ ಫೋನ್‌ಪೇ ಬೆಸೆದುಕೊಂಡಿರುವುದಕ್ಕೆ ಅತೀವ ಸಂತಸವಿದೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಪ್ರತಿಭೆ ಹಾಗೂ ವೈವಿಧ್ಯತೆಯಿಂದ ಕೂಡಿರುವ ಬೆಂಗಳೂರಿನಲ್ಲಿ ನಮ್ಮ ಸಂಸ್ಥೆ ಬೆಳೆದು ನಿಂತಿರುವುದು ನಮಗೆ ಹೆಮ್ಮೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ ಹುಟ್ಟಿ ಇದೀಗ ಭಾರತ ಮೂಲೆ ಮೂಲೆಯಲ್ಲಿ ಪಸರಿಸಿದ್ದೇವೆ. ಇದರ ಪರಿಣಾಮ ದೇಶದ 55 ಕೋಟಿ ಭಾರತೀಯರಿಗೆ ಅತ್ಯಂತ ಸುರಕ್ಷತಿ ಹಾಗೂ ಸುಲಭ ಡಿಜಿಟಲ್ ಪಾವತಿ ಸೇವೆ ಒದಗಿಸಲು ಸಾಧ್ಯವಾಗಿದೆ.
ಸಿಲಿಕಾನ್ ಸಿಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಈ ಖ್ಯಾತಿಗೆ ನಿಜಕ್ಕೂ ಅರ್ಹವಾಗಿದೆ. ಇಲ್ಲಿನ ತಂತ್ರಜ್ಞಾನ, ಮೂಲಭೂತ ಸೌಕರ್ಯ, ಹೊಸತನ, ಸಂಸ್ಕೃತಿಯಿಂದ ಕರ್ನಾಟಕದ ಹಾಗೂ ದೇಶದ ಪ್ರತಿಭಾವಂತ ಯುವ ಸಮೂಹವನ್ನು ಆಕರ್ಷಿಸುತ್ತಿದೆ. ಒಂದು ಸಂಸ್ಥೆಯಾಗಿ ನಾವು ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರಿಗೆ ಆಭಾರಿಯಾಗಿದ್ದೇವೆ. ನಮಗೆ ನೀಡಿದ ಸಹಕಾರ, ಪ್ರೋತ್ಸಾಹ, ಸೌಲಭ್ಯ, ಪೂರಕ ವಾತಾವರಣಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಇಂತಹ ವ್ಯವಸ್ಥೆ, ನೀತಿಗಳಿಲ್ಲದಿದ್ದರೆ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ಸೂಪರ್ ಪವರ್ ನಗರವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.