ನ್ಯಾ। ರೆಡ್ಡಿ ವಿರುದ್ಧದ ಶಾ ಟೀಕೆಗೆ ನಿವೃತ್ತ ಜಡ್ಡ್‌ಗಳ ಆಕ್ಷೇಪ

| N/A | Published : Aug 26 2025, 01:03 AM IST

ನ್ಯಾ। ರೆಡ್ಡಿ ವಿರುದ್ಧದ ಶಾ ಟೀಕೆಗೆ ನಿವೃತ್ತ ಜಡ್ಡ್‌ಗಳ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾ। ಬಿ.ಸುದರ್ಶನ್‌ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದಾಗ ಸಲ್ವಾ ಜುಡುಂ ರದ್ದು ಮಾಡಿ ನಕ್ಸಲಿಸಂ ಪರ ತೀರ್ಪು ನೀಡಿದ್ದರು. ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಕೆಗೆ ನಿವೃತ್ತ ನ್ಯಾಯಾಧೀಶರಿಂದ ಆಕ್ಷೇಪ ವ್ಯಕ್ತವಾಗಿದೆ.

  ನವದೆಹಲಿ :  ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾ। ಬಿ.ಸುದರ್ಶನ್‌ ರೆಡ್ಡಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದಾಗ ಸಲ್ವಾ ಜುಡುಂ ರದ್ದು ಮಾಡಿ ನಕ್ಸಲಿಸಂ ಪರ ತೀರ್ಪು ನೀಡಿದ್ದರು. ಇದರಿಂದ ನಕ್ಸಲಿಸಂ ಶಮನಕ್ಕೆ ಅಡ್ಡಿ ಆಯಿತು’ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಕೆಗೆ ನಿವೃತ್ತ ನ್ಯಾಯಾಧೀಶರಿಂದ ಆಕ್ಷೇಪ ವ್ಯಕ್ತವಾಗಿದೆ.

ಈ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೂ ಆಗಿರುವ ಕನ್ನಡಿಗ ಗೋಪಾಲ ಗೌಡ ಸೇರಿ 18 ನಿವೃತ್ತ ನ್ಯಾಯಾಧೀಶರು ಅಮಿತ್‌ ಶಾಗೆ ಪತ್ರ ಬರೆದು, ‘ಇಂಥ ಹೇಳಿಕೆ ದುರದೃಷ್ಟಕರ’ ಎಂದು ಹೇಳಿದ್ದಾರೆ. ಜತೆಗೆ, ಉಪರಾಷ್ಟ್ರಪತಿ ಚುನಾವಣಾ ಪ್ರಚಾರದ ವೇಳೆ ಈ ರೀತಿ ಹೆಸರು ಹೇಳಿ ಟೀಕೆ ಮಾಡುವುದರಿಂದ ದೂರವುಳಿಯುವಂತೆಯೂ ಸಲಹೆ ನೀಡಿದ್ದಾರೆ.

ಶಾ ಹೇಳಿದ್ದೇನು?:

ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ವಿರುದ್ಧ ಅಮಿತ್‌ ಶಾ ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕಪಡಿಸಿದ್ದರು. ರೆಡ್ಡಿ ಅವರು ನಕ್ಸಲಿಸಂ ಪರವಾಗಿರುವವರು, ಸಲ್ವಾ ಜುಡುಂ ರದ್ದತಿ ತೀರ್ಪು ನೀಡಿದವರು. ಸಾಲ್ವಾ ಜುಡಂ ರದ್ದತಿ ತೀರ್ಪು ಬಾರದೇ ಇರುತ್ತಿದ್ದರೆ ಎಡಪಂಥೀಯ ಉಗ್ರವಾದಕ್ಕೆ 2020ರಲ್ಲೇ ದೇಶದಲ್ಲಿ ಕೊನೆ ಬೀಳುತ್ತಿತ್ತು ಎಂದು ಶಾ ಹೇಳಿದ್ದರು.

ನಿವೃತ್ತ ಜಡ್ಜ್‌ಗಳ ಕಿಡಿ:

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಾಧೀಶರು, ಕೇಂದ್ರ ಗೃಹ ಸಚಿವರ ಹೇಳಿಕೆ ಸಾಲ್ವಾ ಜುಡುಂ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಅರ್ಥೈಸುವಂತೆ ಮಾಡುತ್ತದೆ. ಇದು ದುರದೃಷ್ಟಕರ. ಸುಪ್ರೀಂ ಕೋರ್ಟ್‌ನ ತೀರ್ಪು ನಕ್ಸಲಿಸಂ ಆಗಲಿ, ಅದರ ಸಿದ್ಧಾಂತವನ್ನಾಗಲಿ ಎಲ್ಲೂ ಬೆಂಬಲಿಸಿಲ್ಲ. ಉಪ ರಾಷ್ಟ್ರಪತಿ ಹುದ್ದೆ ಚುನಾವಣಾ ಪ್ರಚಾರವು ಸೈದ್ಧಾಂತಿಕವಾಗಿರಬಹುದು. ಆದರೆ, ಪ್ರಚಾರ ಕಾರ್ಯ ಮಾತ್ರ ನಾಗರಿಕ ರೀತಿ ಹಾಗೂ ಘನತೆಗೆ ತಕ್ಕನಾಗಿರಬೇಕು. ಯಾವುದೇ ಅಭ್ಯರ್ಥಿಯ ತಥಾಕಥಿತ ಸಿದ್ಧಾಂತ ಟೀಕಿಸುವುದರಿಂದ ಅಂತರ ಕಾಯ್ದುಕೊಳ್ಳಬೇಕು. ನ್ಯಾಯಾಲಯದ ತೀರ್ಪನ್ನು ಉನ್ನತಮಟ್ಟದ ರಾಜಕೀಯ ನಾಯಕರು ತಪ್ಪಾಗಿ ಅರ್ಥೈಸಿಕೊಂಡಾಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಮೇಲೂ ಅದು ತೀವ್ರ ಪ್ರಭಾವ ಬೀರುತ್ತದೆ. ಇದು ನ್ಯಾಯಾಲಯದ ಸ್ವಾತಂತ್ರ್ಯವನ್ನೇ ಅಲುಗಾಡಿಸುತ್ತದೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಿಕ್‌, ಅಬೈ ಓಕಾ, ವಿಕ್ರಮಜಿತ್‌ ಸೇನ್‌, ಕುರಿಯನ್ ಜೋಸೆಫ್‌, ಮದನ್‌ ಬಿ.ಲೋಕೂರ್‌ ಮತ್ತು ಜೆ. ಚಲಮೇಶ್ವರ್‌ ಅವರೂ ಈ ಪತ್ರಕ್ಕೆ ಸಹಿಹಾಕಿದ್ದಾರೆ.

ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾ। ರೆಡ್ಡಿ ವಿರುದ್ಧ ವಿಪಕ್ಷಕ್ಕೆ ನಕ್ಸಲ್‌ ಪೀಡಿತರ ಪತ್ರ

ನವದೆಹಲಿ: ವಿಪಕ್ಷ ಇಂಡಿಯಾ ಕೂಟದ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ನ್ಯಾ। ಸುದರ್ಶನ್‌ ರೆಡ್ಡಿ ಅವರು ನಕ್ಸಲ್‌ ಪರ ಎಂದು ಬಿಜೆಪಿ ಟೀಕಿಸುತ್ತಿರುವ ನಡುವೆಯೇ, ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಛತ್ತೀಸಗಢದ ನಕ್ಸಲ್‌ ಪೀಡಿತರು ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳಿಗೆ ಪತ್ರ ಬರೆದಿದ್ದಾರೆ.2011ರಲ್ಲಿ ಸುಪ್ರೀಂ ಕೋರ್ಟ್‌ನ ಜಡ್ಜ್‌ ಆಗಿದ್ದ ನ್ಯಾ। ರೆಡ್ಡಿ ನೀಡಿದ್ದ ಸಲ್ವಾ ಜುಡುಂ ನಕ್ಸಲ್‌ ಆಂದೋಲನದ ಪರ ತೀರ್ಪನ್ನು ಉಲ್ಲೇಖಿಸಿ, ಅವರು ನಕ್ಸಲರ ಪರವಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಆರೋಪಿಸಿದ್ದರು. ಹೀಗಿರುವಾಗಲೇ, ನಕ್ಸಲರಿಂದ ತಮಗಾದ ಸಮಸ್ಯೆಗಳ ಬಗ್ಗೆ ವಿವರಿಸಿ ಸಂತ್ರಸ್ತರು ವಿಪಕ್ಷಗಳಿಗೆ ಪತ್ರ ಬರೆದಿದ್ದು, ರೆಡ್ಡಿ ಅವರನ್ನು ಬೆಂಬಲಿಸದಂತೆ ಕೋರಿದ್ದಾರೆ.

Read more Articles on