ಉತ್ತರಾಖಂಡದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಈಗ ಎಲ್ಲ ಧರ್ಮೀಯರಿಗೂ ಒಂದೇ ನಾಗರಿಕ ಕಾಯ್ದೆ

| N/A | Published : Jan 28 2025, 12:49 AM IST / Updated: Jan 28 2025, 04:48 AM IST

ಸಾರಾಂಶ

  ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಎಲ್ಲಾ ಧರ್ಮೀಯರಿಗೂ ಸಮಾನ ಕಾನೂನಿಗೆ ಅ‍ವಕಾಶ ಮಾಡಿಕೊಡುವ ಏಕರೂಪದ ನಾಗರಿಕ ಸಂಹಿತೆ ಸೋಮವಾರದಿಂದ ಉತ್ತರಾಖಂಡ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ.

ಡೆಹ್ರಾಡೂನ್‌: ಮದುವೆ, ಲಿವ್‌ ಇನ್‌ ರಿಲೇಷನ್‌ಶಿಪ್‌, ವಿಚ್ಛೇದನದ ನೋಂದಣಿ ಕಡ್ಡಾಯ ಮಾಡುವ, ವಿವಾಹ, ವಿಚ್ಛೇದನ ಮತ್ತು ಉತ್ತರದಾಯಿತ್ವದ ವಿಚಾರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಎಲ್ಲಾ ಧರ್ಮೀಯರಿಗೂ ಸಮಾನ ಕಾನೂನಿಗೆ ಅ‍ವಕಾಶ ಮಾಡಿಕೊಡುವ ಏಕರೂಪದ ನಾಗರಿಕ ಸಂಹಿತೆ ಸೋಮವಾರದಿಂದ ಉತ್ತರಾಖಂಡ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಸಂಹಿತೆಯಿಂದ ಬಹುಪತ್ನಿತ್ವ ನಿಷೇಧವಾಗಲಿದ್ದು, ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಪಾಲು ಸಿಗಲಿದೆ.

ಈ ಮೂಲಕ ಸ್ವಾತಂತ್ರ್ಯಾನಂತರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಪೋರ್ಚುಗೀಸರ ಆಡಳಿತಾವಧಿಯಿಂದಲೇ ಗೋವಾದಲ್ಲಿ ಇದೇ ರೀತಿಯ ಸಮಾನ ನಾಗರಿಕ ಕಾನೂನು ಜಾರಿಯಲ್ಲಿದೆ.

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಅವರು ತಮ್ಮ ಅಧಿಕೃತ ಕಚೇರಿಯಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಬಿಡುಗಡೆ ಮಾಡಿ ಹಾಗೂ ಮದುವೆ, ಲಿವ್‌ ಇನ್‌ರಿಲೇಷನ್‌ಶಿಪ್‌, ವಿಚ್ಛೇದನಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯ ಮಾಡುವ ಪೋರ್ಟಲ್‌ಗೆ ಚಾಲನೆ ನೀಡುವ ಮೂಲಕ ಏಕರೂಪದ ನಾಗರಿಕ ಸಂಹಿತೆಗೆ ರಾಜ್ಯದಲ್ಲಿ ಚಾಲನೆ ನೀಡಿದರು.

ರಾಜ್ಯದ ಎಲ್ಲಾ ನಿವಾಸಿಗಳಿಗೂ ಹಾಗೂ ಎಲ್ಲಾ ಧರ್ಮೀಯರಿಗೂ ಈ ಸಂಹಿತೆಯ ಮೂಲಕ ಸಮಾನ ಕಾನೂನು ಅನುಷ್ಠಾನಕ್ಕೆ ಬರಲಿದೆ. ಈ ಕಾಯ್ದೆ ಜಾರಿಯ ಯಶಸ್ಸು ಜನರಿಗೆ ಸಲ್ಲಬೇಕು, ಈ ಕಾಯ್ದೆಯಿಂದಾಗಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯಗಳಿಗೆ ಅಂತ್ಯಬೀಳಲಿದೆ ಎಂದು ಧಾಮಿ ಹೇಳಿದ್ದಾರೆ.

ಚುನಾವಣಾ ಭರವಸೆ:

ತನ್ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲೇ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಬಿಜೆಪಿ ಘೋಷಿಸಿತ್ತು. ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಒಂದು ವರ್ಷದ ಬಳಿಕ ಇದೀಗ ಧಾಮಿ ಸರ್ಕಾರವು ರಾಜ್ಯದಲ್ಲಿ ಏಕರೂಪದ ನಾಗರಿಕ ಸಂಹಿತೆ ಕಾಯ್ದೆಯನ್ನು ಜಾರಿಗೊಳಿಸಿದೆ.

ವಿವಾಹ ಕಾಯ್ದೆಯಲ್ಲಿ ಏನು ಬದಲು?

ರಾಜ್ಯದಲ್ಲಿ ಇನ್ನು ಮುಂದೆ ಎಲ್ಲಾ ವಿವಾಹಗಳನ್ನು 60 ದಿನದೊಳಗೆ ನೋಂದಣಿ ಮಾಡುವುದು ಕಡ್ಡಾಯ

2010ರ ಮಾ.26ರಿಂದ 2024ರ ಜ.26ರ ವರೆಗಿನ ಎಲ್ಲಾ ಮದುವೆ 6 ತಿಂಗಳಲ್ಲಿ ನೋಂದಣಿ ಮಾಡಬೇಕು

ವಿವಾಹಕ್ಕೆ ಯುವಕರಿಗೆ 21 ವರ್ಷ, ಯುವತಿಯರಿಗೆ 18 ವರ್ಷ ಕಡ್ಡಾಯ. ಮದುವೆಗೆ ಇಬ್ಬರ ಒಪ್ಪಿಗೆ ಅಗತ್ಯ

ಬಾಲ್ಯ ವಿವಾಹಕ್ಕೆ ನಿರ್ಬಂಧ. ವಿಚ್ಛೇದನದ ನೋಂದಣಿ ಇನ್ನು ಮುಂದೆ ಈ ಕಾಯ್ದೆಯಡಿ ಕಡ್ಡಾಯವಾಗಿರಲಿದೆ

ಬಹುಪತ್ನಿತ್ವ, ನಿಖಾ ಹಲಾಲ ರದ್ದು:

ಬಹುಪತ್ನಿತ್ವ, ಮುಸ್ಲಿಮರಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್‌, ನಿಖಾ ಹಲಾಲಾ (ಮುಸ್ಲಿಮರಲ್ಲಿರುವ ವಿಚ್ಛೇದನದ ನಂತರ ಮರುಮದುವೆ ಪದ್ಧತಿ) ರದ್ದು.

ಆದರೆ ಈ ನಿಯಮ ಪರಿಶಿಷ್ಟ ಪಂಗಡಗಳಿಗೆ ಅನ್ವಯ ಆಗುವುದಿಲ್ಲ

ಲಿವ್‌ ಇನ್‌ ರಿಲೇಷನ್‌ಶಿಪ್‌ ನಿಯಮ:

ಕಾಯ್ದೆಯಡಿ ಇನ್ನು ಮುಂದೆ ಲಿವ್‌ ಇನ್‌ ರಿಲೇಷನ್‌ಶಿಪ್‌ ನೋಂದಣಿ ಕಡ್ಡಾಯ

21 ವರ್ಷದ ಕೆಳಗಿನವರ ಲಿವ್‌-ಇನ್‌ ರಿಲೇಷನ್‌ಶಿಪ್‌ಗೆ ಪೋಷಕರ ಅನುಮತಿ ಅಗತ್ಯ

ಉತ್ತರಾಖಂಡದ ನಿವಾಸಿ ಎಲ್ಲೇ ಇದ್ದರೂ ಎಲ್ಲರಿಗೂ ಈ ನಿಯಮ ಅನ್ವಯ ಆಗಲಿದೆ

ಲಿವ್‌ ಇನ್‌ ರಿಲೇಷನ್‌ಶಿಪ್‌ ಘೋಷಣೆ ಮಾಡದಿದ್ದರೆ ಜೈಲು, 25000 ರು.ವರೆಗೆ ದಂಡ

ಲಿವ್‌ ಇನ್‌ ರಿಲೇಷನ್‌ಶಿಪ್‌ನಿಂದ ಹುಟ್ಟುವ ಮಕ್ಕಳಿಗೂ ಕಾಯ್ದೆ ಕಾನೂನಿನ ರಕ್ಷಣೆ

ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿ ಮಗು ಜನಿಸಿದರೆ ಏಳು ದಿನದೊಳಗೆ ನೋಂದಣಿ ಕಡ್ಡಾಯ

ಉಯಿಲು ಓದುವುದು ಕಡ್ಡಾಯ:

ಯೋಧರು, ನೌಕಾ ಸಿಬ್ಬಂದಿಗೆ ಉಯಿಲು ಬದಲಾವಣೆಗೆ ವಿಶೇಷ ನಿಬಂಧನೆಗಳ ಮೂಲಕ ಅವಕಾಶ

ಉಯಿಲು ಬರಹಗಾರರು ತಮ್ಮ ಆಧಾರ್ ಸಂಖ್ಯೆಯ ಮಾಹಿತಿ ಸಲ್ಲಿಸುವುದು ಕಡ್ಡಾಯ

ಎರಡು ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ಚಿತ್ರೀಕರಣ ಮಾಡುವುದು ಕಡ್ಡಾಯವಾಗಲಿದೆ