ಸಾರಾಂಶ
ನವದೆಹಲಿ : ವೈದ್ಯಕೀಯ ಘಟಿಕೋತ್ಸವದ ವೇಳೆ ಕಪ್ಪು ನಿಲುವಂಗಿ ಮತ್ತು ಕ್ಯಾಪ್ ಧರಿಸುವುದು ವಸಾಹತುಶಾಹಿ ಪರಂಪರೆಯಾಗಿದ್ದು ಅದನ್ನು ನಮ್ಮ ಅಧೀನದ ಶೈಕ್ಷಣಿಕ ಸಂಸ್ಥೆಗಳು ಬದಲಾಯಿಸಬೇಕು ಎಂದು ಆರೋಗ್ಯ ಸಚಿವಾಲಯವು ಎಲ್ಲ ಮೆಡಿಕಲ್ ಕಾಲೇಜು ಹಾಗೂ ವಿವಿಗಳಿಗೆ ಸೂಚಿಸಿದೆ.
ಶುಕ್ರವಾರ ಸುತ್ತೋಲೆ ಹೊರಡಿಸಿರುವ ಸಚಿವಾಲಯ, ಆಂಗ್ಲ ಪರಂಪರೆಯ ಉಡುಪಿನ ಬದಲು ರಾಜ್ಯದ ಸ್ಥಳೀಯ ಸಂಪ್ರದಾಯಗಳ ಆಧಾರದ ಮೇಲೆ ಸೂಕ್ತ ಡ್ರೆಸ್ ಕೋಡ್ ಅನ್ನು ಘಟಿಕೋತ್ಸವಕ್ಕೆ ವಿನ್ಯಾಸಗೊಳಿಸುವಂತೆ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶಿಸಿದೆ.
‘ಕಪ್ಪು ನಿಲುವಂಗಿ ಹಾಗೂ ಕ್ಯಾಪ್ ಬ್ರಿಟಿಷ್ ಕಾಲದ ವಸಾಹತುಶಾಹಿ ಪರಂಪರೆಯಾಗಿದ್ದು ಅದನ್ನು ಬದಲಾಯಿಸಬೇಕಾಗಿದೆ. ಈ ಆದೇಶವು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಪಂಚಪ್ರಾಣ (ಐದು ನಿರ್ಣಯಗಳು) ಅನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದೆ.
ಮೋದಿ ಅವರು 2022ರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ 5 ನಿರ್ಣಯಗಳನ್ನು ವಿವರಿಸಿದ್ದರು. ಅವುಗಳಲ್ಲಿ ವಸಾಹತುಶಾಹಿ ಮನಸ್ಥಿತಿಯ ಕುರುಹು ತೆಗೆದುಹಾಕುವುದು ಹಾಗೂ ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಪಡುವುದು ಸೇರಿತ್ತು.