ಸಾರಾಂಶ
ಬರೇಲಿ: ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಸಹಾಯದಿಂದ ಸಂಚರಿಸುತ್ತಿದ್ದ ಕಾರೊಂದು ದುರಸ್ತಿ ಹಂತದಲ್ಲಿದ್ದ ಸೇತುವೆಯಿಂದ ಉರುಳಿ ನದಿಗೆ ಬಿದ್ದು ಅದರಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಕಾರೊಂದು ಭಾನುವಾರ ಬರೇಲಿಯಿಂದ ಬದೌನ್ ಜಿಲ್ಲೆಯ ದಾತ್‌ಗಂಜ್‌ಗೆ ತೆರಳುತ್ತಿತ್ತು. ಬೆಳಗ್ಗೆ 10 ಗಂಟೆ ವೇಳೆಗೆ ಖಲ್ಪುರ್-ದಾತ್‌ಗಂಜ್ ಪ್ರದೇಶದಲ್ಲಿ ದುರಸ್ತಿ ಹಂತದಲ್ಲಿದ್ದ ಸೇತುವೆಯ ಮಾಹಿತಿ ತಿಳಿಯದೇ ವೇಗವಾಗಿ ಚಲಿಸಿದೆ. ಈ ವೇಳೆ ಕಾರು ರಾಮ್‌ಗಂಜ್ ನದಿಗೆ ಉರುಳಿ ಅದರಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಇತ್ತೀಚಿನ ಪ್ರವಾಹದ ವೇಳೆ ಸೇತುವೆ ಒಂದು ಭಾಗ ಕುಸಿದಿತ್ತು. ಆದರೆ ಅದು ಜಿಪಿಎಸ್‌ನಲ್ಲಿ ಪರಿಷ್ಕರಣೆ ಆಗದ ಹಿನ್ನೆಲೆ ಈ ದುರಂತ ಸಂಭವಿಸಿದೆ.
ಬಂಗಾಳದ ಆಸ್ಪತ್ರೆ ಮೇಲೆ 100 ಜನರಿಂದ ದಾಳಿ: ಮೂವರು ನರ್ಸ್‌ಗಳಿಗೆ ಗಾಯ
ಕೋಲ್ಕತ್ತಾ: ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯಲ್ಲಿನ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಮಾಸುವ ಮುನ್ನವೇ ಮೃತ ರೋಗಿಯ ಕುಟುಂಬದ 100ಕ್ಕೂ ಹೆಚ್ಚು ಸದಸ್ಯರು ಆಸ್ಪತ್ರೆ ಮೇಲೆ ದಾಳಿ ನಡೆಸಿದ ಘಟನೆ ಕೋಲ್ಕತಾದಲ್ಲಿ ನಡೆದಿದೆ. ಈ ದಾಳಿಯಲ್ಲಿ ಮೂವರು ನರ್ಸ್‌ಗಳು ಗಾಯಗೊಂಡಿದ್ದಾರೆ. ರೋಗಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆತನ ಕುಟುಂಬ ನೂರಾರು ಸದಸ್ಯರು ಇಲ್ಲಿನ ವಿದ್ಯಾಸಾಗರ್ ಆಸ್ಪತ್ರೆ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿ ಕುರ್ಚಿ ಮುರಿದು, ಗಾಜು ಒಡೆದು ಹಾಕಿ, ಬಾಗಿಲು ಮುರಿದು ಹಾಕಿದ್ದಾರೆ. ಅಲ್ಲದೆ ಔಷಧಿಗಳನ್ನು ಎಸೆದು ರಂಪಾಟ ಮಾಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಹತೋಟಿಗೆ ತರಲುವಲ್ಲಿ 4 ಗಂಟೆ ಬೇಕಾಯಿತು. ಘಟನೆ ಸಂಬಂಧ 9 ಜನರನ್ನು ಬಂಧಿಸಲಾಗಿದೆ.
ಯುಪಿ ರೈಲ್ವೆ ಹಳಿಯ ಮೇಲೆ 25 ಅಡಿ ಉದ್ದದ ಕಬ್ಬಿಣದ ರಾಡ್: ತಪ್ಪಿದ ಅನಾಹುತ
ಪಿಲಿಭೀತ್ (ಉ.ಪ್ರ.): ಉತ್ತರಪ್ರದೇಶದ ಪಿಲಿಭೀತ್- ಬರೇಲಿ ನಡುವೆ ರೈಲು ಹಳಿಯ ಮೇಲೆ 25 ಅಡಿ ಉದ್ದದ ಕಬ್ಬಿಣದ ರಾಡ್ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಈ ಮಾರ್ಗದಲ್ಲಿ ಚಲಿಸುತ್ತಿದ್ದ ರೈಲಿನ ಇಂಜಿನ್ ರಾಡ್‌ಗೆ ಬಡಿದ ಪರಿಣಾಮ ಅದು ಕೆಲ ಕಾಲ ಅಲ್ಲೇ ನಿಲ್ಲುವಂತಾಯಿತು. ನಂತರ. ಸರ್ಕಾರಿ ರೈಲ್ವೇ ಪೊಲೀಸ್, ರೈಲ್ವೆ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. ಅಲ್ಲೇ ಸಮೀಪದಲ್ಲಿ ಕೆಳಸೇತುವೆಯ ಕಾಮಗಾರಿ ನಡೆಯುತ್ತಿರುವಲ್ಲಿಂದ ರಾಡು ತಂದು ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ರಾಡ್ ಅನ್ನು ಕಟ್ ಮಾಡುವ ಉದ್ದೇಶದಿಂದ ತಂದು ಹಳಿಯ ಮೇಲೆ ಇಡಲಾಗಿತ್ತೋ ಅಥವಾ ಇದರ ಹಿಂದೆ ದುಷ್ಕೃತ್ಯ ಇದೆಯೋ ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ರೈಲಿನ ಹಳಿ ತಪ್ಪಿಸುವ ಹಲವು ದುಷ್ಕೃತ್ಯ ನಡೆಸಲಾಗಿದೆ.
ಶಬರಿಮಲೆ: 9 ದಿನಗಳಲ್ಲಿ 6 ಲಕ್ಷ ಭಕ್ತರ ಭೇಟಿ; 41 ಕೋಟಿ ಆದಾಯ ಸಂಗ್ರಹ
ಶಬರಿಮಲೆ: ಮಂಡಲಂ- ಮಕರವಿಳಕ್ಕುಂ ಪ್ರಯುಕ್ತ ಕಳೆದ 9 ದಿನಗಳಲ್ಲಿ 6 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪನ ರ್ದರ್ಶನ ಪಡೆದಿದ್ದಾರೆ. ಈ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಈ ಕುರಿತು ಮಾಹಿತಿ ನೀಡಿರುವ ತಿರುವಾಂಕೂರು ದೇವಸ್ವಂ ಮಂಡಳಿ , ‘ನ.16ರಂದು ದೇವಸ್ಥಾನ ತೆರೆದಂದಿನಿಂದ 6,12,290 ಭಕ್ತರು ಆಗಮಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,03,501 ಜನ ಭೇಟಿ ನೀಡಿದ್ದರು. ಈ ಅವಧಿಯಲ್ಲಿ 41.64 ಕೋಟಿ ರು. ಆದಾಯ ಸಂಗ್ರಹವಾಗಿದ್ದು, ಇದು ಕಳೆದ ಬಾರಿಗಿಂತ 13.33 ಕೋಟಿ ರು. ಅಧಿಕ. ಇದು ಸುಧಾರಿತ ಸೌಲಭ್ಯಗಳು ಹಾಗೂ ವ್ಯವಸ್ಥೆಗಳಿಂದ ಸಾಧ್ಯವಾಗಿದೆ’ ಎಂದರು.