ಸಾರಾಂಶ
ನವದೆಹಲಿ: ಉತ್ತರಪ್ರದೇಶದಲ್ಲಿ ಜಾರಿಯಾಗುತ್ತಿರುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ನಡೆಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಜೋಶಿ, ಪ್ರಧಾನ್ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ, ಪ್ರಧಾನ್ ಮಂತ್ರಿ ಸೂರ್ಯ ಘರ್ ಮೊದಲಾದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೋಶಿ, ‘2025-26ರ ರಬಿ ಮಾರುಕಟ್ಟೆ ಋತುವಿನಲ್ಲಿ 31 ಮೆ.ಟನ್ ಗೋಧಿ ಸಂಗ್ರಹವನ್ನು ಅಂದಾಜಿಸಿದೆ. ಪ್ರಸ್ತುತ, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಏಪ್ರಿಲ್ 1ಕ್ಕೆ 7.46 ಮೆಟ್ರಿಕ್ ಟನ್ ಬಫರ್ ವಿರುದ್ಧ 13.5 ಮೆಟ್ರಿಕ್ ಟನ್ ಗೋಧಿ ದಾಸ್ತಾನು ಹೊಂದಿದೆ. 31 ಮೆಟ್ರಿಕ್ ಟನ್ ಗೋಧಿ ಸಂಗ್ರಹ ಗುರಿಗೆ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯಗಳು ಕೊಡುಗೆ ನೀಡಬೇಕು’ ಎಂದರು.
ಉತ್ತರ ಪ್ರದೇಶ ಸರ್ಕಾರ ಏಪ್ರಿಲ್ ಮೊದಲ ವಾರದಲ್ಲಿ 1 ಲಕ್ಷ ಟನ್ ಗೋಧಿ ಸಂಗ್ರಹಿಸಿದ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ಇದೇ ವೇಳೆ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದರು.