ಕಾವಾಡಿಗಳ ಶ್ರಾವಣ: ಉತ್ತರ ಪ್ರದೇಶ, ಉತ್ತರಾ ಖಂಡದ ಹೋಟೆಲಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

| Published : Jul 20 2024, 12:46 AM IST / Updated: Jul 20 2024, 05:29 AM IST

ಸಾರಾಂಶ

ಶಿವಭಕ್ತರಾದ ಕಾವಾಡಿಗಳು ಶ್ರಾವಣದಲ್ಲಿ ಗಂಗೆಯ ಪವಿತ್ರ ನೀರು ತರಲು ಪಾದಯಾತ್ರೆ ಸಾಗುವಾಗ ಎಲ್ಲಾ ಜಿಲ್ಲೆಗಳ ಹೋಟೆಲ್‌, ಢಾಬಾ ಮತ್ತು ರಸ್ತೆ ಬದಿಯ ಆಹಾರ ಮಾರಾಟ ಸ್ಥಳಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ ಮಾಡಿ   ಆದೇಶ  

ಲಖನೌ/ಡೆಹ್ರಾಡೂನ್‌: ಶಿವಭಕ್ತರಾದ ಕಾವಾಡಿಗಳು ಶ್ರಾವಣದಲ್ಲಿ ಗಂಗೆಯ ಪವಿತ್ರ ನೀರು ತರಲು ಪಾದಯಾತ್ರೆ ಸಾಗುವಾಗ ಎಲ್ಲಾ ಜಿಲ್ಲೆಗಳ ಹೋಟೆಲ್‌, ಢಾಬಾ ಮತ್ತು ರಸ್ತೆ ಬದಿಯ ಆಹಾರ ಮಾರಾಟ ಸ್ಥಳಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ ಮಾಡಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಆದೇಶ ಹೊರಡಿಸಿದ್ದಾರೆ.

ಗುರುವಾರ ಮೊದಲ ಹಂತದಲ್ಲಿ ಇದನ್ನು ಉ.ಪ್ರ.,ದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಮಾತ್ರ ಹೊರಡಿಸಲಾಗಿತ್ತು. ಇದು ಮುಸ್ಲಿಮರನ್ನು ಗುರಿಯಾಗಿಸಿ ಮಾಡಿದ ಆದೇಶ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಆದರೆ ಇದಕ್ಕೆ ಮಣಿಯದೇ ಆ ಅದೇಶವನ್ನು ಇದೀಗ ಉ.ಪ್ರ. ಹಾಗೂ ಉತ್ತರಾಖಂಡದಲ್ಲಿ ರಾಜ್ಯವ್ಯಾಪಿಯಾಗಿ ವಿಸ್ತರಿಸಲಾಗಿದೆ.

ಆದೇಶದ ಅನ್ವಯ, ಎಲ್ಲಾ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಮತ್ತು ಅದರಲ್ಲಿ ಕೆಲಸ ಮಾಡುವವರ ಹೆಸರು ಪ್ರದರ್ಶನ ಮಾಡುವುದು ಕಡ್ಡಾಯ.

ಆದೇಶದ ಹಿನ್ನೆಲೆ ಕುರಿತು ಪ್ರತಿಕ್ರಿಯೆ ನೀಡಿರುವ ಉ.ಪ್ರ, ಸಚಿವ ಕಪಿಲ್‌ ದೇವ್‌ ಅಗರ್‌ವಾಲ್‌, ‘ಮುಸ್ಲಿಮರು ವೈಷ್ಣೋದೇವಿ, ಶಾಕಾಬರಿ ಹೆಸರಲ್ಲಿ ಹೋಟೆಲ್‌ ತೆರೆದು ಅಲ್ಲಿ ಮಾಂಸಾಹಾರ ವಿತರಣೆ ಮಾಡುತ್ತಿದ್ದಾರೆ. ಹೀಗಾಗಿ ಕಾವಾಡಿಗಳಿಗೆ ಮಾರ್ಗ ಮಧ್ಯದಲ್ಲಿ ಯಾವ ಹೋಟೆಲ್‌ಗಳಿಗೆ ತೆರಳಿ ಆಹಾರ ಸೇವನೆ ಮಾಡಬೇಕು ಎಂದು ಗೊಂದಲ ಉಂಟಾಗುತ್ತಿದೆ. ಅದನ್ನು ನಿವಾರಿಸಲು ಈ ಆದೇಶ ಹೊರಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.