ಸಾರಾಂಶ
ಫತೇಪುರ: ಉತ್ತರ ಪ್ರದೇಶದ ಫತೇಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 24 ವರ್ಷದ ವಿಕಾಸ್ ದುಬೆ ಎನ್ನುವ ಯುವಕನೊಬ್ಬ, 40 ದಿನಗಳ ಅಂತರದಲ್ಲಿ ವಿಷಕಾರಿ ಹಾವಿನಿಂದ ಬರೋಬ್ಬರಿ 7 ಸಲ ಕಚ್ಚಿಸಿಕೊಂಡಿದ್ದಾನೆ. ಅಲ್ಲದೇ ಪ್ರತಿ ಶನಿವಾರವೇ ಯುವಕ ಹಾವಿನ ಕಡಿತಕ್ಕೆ ಒಳಗಾಗಿರುವ ಆಶ್ವರ್ಯಕಾರಿ ಸುದ್ದಿ ಹೊರ ಬಿದ್ದಿದೆ.
ಪ್ರತಿ ಶನಿವಾರ ಹಾವಿನ ಕಡಿತಕ್ಕೆ ಒಳಗಾಗುವ ಯುವಕ ಒಂದೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ. ಅಲ್ಲದೇ ಆಸ್ಪತ್ರೆಗೆ ದಾಖಲಾದ ಒಂದೇ ದಿನದಲ್ಲಿ ಗುಣಮುಖನಾಗುತ್ತಿದ್ದ ಎನ್ನುವ ಅಂಶ ಬಯಲಾಗಿದೆ. ಹಾವು ಕಚ್ಚಿದ ಬಳಿಕ ಆತ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಹಣಕಾಸು ನೆರವನ್ನೂ ಕೇಳಿದ್ದ.
ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೀವ್ ನಯನ್ ಗಿರಿ ಪ್ರತಿಕ್ರಿಯಿಸಿ, ‘ನಿಜವಾಗಿಯೂ ಹಾವು ಕಚ್ಚುತ್ತಿದೆಯೇ ಎಂಬುದನ್ನು ನಾವು ಲೆಕ್ಕಾಚಾರ ಮಾಡಬೇಕು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಸಾಮರ್ಥ್ಯವನ್ನು ನೋಡಬೇಕಿದೆ. ಪ್ರತಿ ಶನಿವಾರ ಒಬ್ಬ ವ್ಯಕ್ತಿಗೆ ಹಾವು ಕಚ್ಚುತ್ತದೆ. ಮತ್ತು ಅವನು ಒಂದೇ ಆಸ್ಪತ್ರೆಗೆ ದಾಖಲಾಗಿಸಲಾಗುತ್ತದೆ. ಒಂದೇ ದಿನದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಾನೆ. ಇದು ಆಶ್ವರ್ಯಕರ. ಹೀಗಾಗಿ ಹೆಚ್ಚಿನ ತನಿಖೆಗೆ ಮುಖ್ಯ ವೈದ್ಯಾಧಿಕಾರಿ ಮೂವರು ವೈದ್ಯರ ತಂಡ ರಚಿಸಲಾಗಿದೆ’ ಎಂದಿದ್ದಾರೆ.
ಅಲ್ಲದೆ, ಆತ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಹಣಕಾಸು ನೆರವು ಕೇಳಿದ್ದಕ್ಕೆ ಗಿರಿ ಪ್ರತಿಕ್ರಿಯಿಸಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಲಾಗಿದೆ’ ಎಂದಿದ್ದಾರೆ.