ಸಾರಾಂಶ
ಅಯೋಧ್ಯೆ: ರಾಮಮಂದಿರದಲ್ಲಿ ಬಾಲರಾಮನ ಹಣೆಗೆ ರಾಮನವಮಿಯ ಪವಿತ್ರ ದಿನದಂದು ಸೂರ್ಯರಶ್ಮಿಯ ಸ್ಪರ್ಶವಾಗಿದೆ.
ಮಧ್ಯಾಹ್ನ 12ರ ಸುಮಾರಿಗೆ ಉಂಟಾದ ಕೌತುಕವನ್ನು ದೇಗುಲದಲ್ಲಿ ಆಗಮಿಸಿದ್ದ ಭಕ್ತರು ‘ಜೈಶ್ರೀರಾಮ್’ ಉದ್ಘೋಷದೊಂದಿಗೆ ಕಣ್ತುಂಬಿಕೊಂಡರು. ಅಲ್ಲದೆ ದೂರದರ್ಶನವೂ ಸಹ ಈ ಕೌತುಕವನ್ನು ನೇರಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಶ್ರೀರಾಮನ ಭಕ್ತು ಈ ವಿಸ್ಮಯವನ್ನು ಕಣ್ತುಂಬಿಕೊಂಡು ಪಾವನವಾದರು.
ಜ.22ರಂದು ಪ್ರಾಣಪ್ರತಿಷ್ಠಾಪನೆಯಾಗಿದ್ದ ಬಾಲರಾಮನ ಮೂರ್ತಿಯ ಮೇಲೆ ಇದೇ ಮೊದಲ ಬಾರಿಗೆ ಸೂರ್ಯರಶ್ಮಿ ಬಿದ್ದಿದ್ದು, ಇನ್ನು ಮುಂದೆ ಪ್ರತಿವರ್ಷವೂ ಸಹ ರಾಮನವಮಿಯ ಶುಭಗಳಿಗೆಯಲ್ಲಿ ಸೂರ್ಯನ ಕಿರಣಗಳು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸುವಂತೆ ಕಟ್ಟಡ ವಿನ್ಯಾಸ ಮಾಡಲಾಗಿದೆ.
ಹೇಗೆ ಬಿತ್ತು ಸೂರ್ಯರಶ್ಮಿ?
ಸೂರ್ಯನ ಕಿರಣವನ್ನು ಕನ್ನಡಿಯ ಮೂಲಕ ಪ್ರತಿಫಲನವಾಗಿ ದೇಗುಲದ ಗರ್ಭಗೃಹಕ್ಕೆ ಬೀಳುವಂತೆ ರೂರ್ಕಿಯ ಸಿಎಸ್‌ಐಆರ್ ತಜ್ಞರು ಮಾಡಿದ್ದರು. ಇದಕ್ಕೆ ಬೆಂಗಳೂರಿನ ಆಸ್ಟ್ರೋಫಿಸಿಕ್ಸ್ ಇನ್‌ಸ್ಟಿಟ್ಯೂಟ್ ಸಹಾಯದಿಂದ ಕನ್ನಡಿಗಳು ಮತ್ತು ಪ್ರತಿಫಲನ ಗಾಜುಗಳನ್ನು ಬಳಕೆ ಮಾಡಲಾಗಿತ್ತು. ದೇಗುಲದ ಮೂರನೇ ಮಹಡಿಯಲ್ಲಿ ಬೀಳುವ ಸೂರ್ಯನ ಕಿರಣವನ್ನು ಈ ರೀತಿ ಕನ್ನಡಿ ಮತ್ತು ಗಾಜುಗಳ ಸಹಾಯದಿಂದ ರಾಮನ ಹಣೆಯ ಮೇಲೆ ಬೀಳುವಂತೆ ಮಾಡಲಾಯಿತು.
ಸೂರ್ಯ ತಿಲಕದ ಮಹತ್ವವೇನು?ಶ್ರೀರಾಮನ ಹುಟ್ಟುಹಬ್ಬವನ್ನು ರಾಮನವಮಿ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. ಆ ದಿನದಂದು ಬಾಲರಾಮನ ಮೂರ್ತಿಯ ಹಣೆಯ ಮೇಲೆ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ತಿಲಕದ ರೀತಿಯಲ್ಲಿ ಸೂರ್ಯರಶ್ಮಿ ಬೀಳುವಂತೆ ಮಾಡುವುದೇ ಸೂರ್ಯ ತಿಲಕ ಯೋಜನೆಯ ಉದ್ದೇಶವಾಗಿದೆ. ಪ್ರತಿಬಾರಿ ರಾಮನವಮಿಯಂದು ಸೂರ್ಯನ ದಿಕ್ಕು ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶಿಷ್ಟ ತಂತ್ರಜ್ಞಾನದ ಮೂಲಕ ಇಕ್ಷ್ವಾಕು ಕುಲದಲ್ಲಿ ಸೂರ್ಯವಂಶಕ್ಕೆ ಸೇರಿದವನೆಂದು ನಂಬಲಾಗುವ ಶ್ರೀರಾಮನ ಹಣೆಯ ಮೇಲೆ ಸೂರ್ಯರಶ್ಮಿ ಬೀಳುವಂತೆ ಯೋಜನೆ ರೂಪಿಸಲಾಗಿದೆ.